ಸುದ್ದಿ ಸಂಗ್ರಹ ಕಲಬುರಗಿ
ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಹಿಂದಿ ಭಾಷೆ ಬಳಕೆಯಲ್ಲಿದೆ, ಜಾಗತಿಕ ಮನ್ನಣೆ ದೊರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹಿಂದಿ ಲೇಖಕ ಸುನೀಲ್ ಚೌಧರಿ ಹೇಳಿದರು.
ನಗರದ ಶಹಬಾಜಾರ ಮಹಾದೇವ ನಗರದ ಸ್ವಾತಿ ಪ್ರೌಢ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಹಿಂದಿ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದ ಅತಿ ಹೆಚ್ಚು ಜನರು ಹಿಂದಿ ಭಾಷೆಯುಲ್ಲಿ ಮಾತನಾಡುವತ್ತಾರೆ, ಸುಲಭವಾಗಿ ಅರ್ಥವಾಗುವ ಭಾಷೆಯಾಗಿದೆ, ದೇಶದ ಉದ್ದಗಲಕ್ಕೂ ವ್ಯಾಪಿಸಿದೆ. ಹಿಂದಿ ಭಾಷೆಯು ನಮ್ಮ ದೇಶದ ಸಂಸ್ಕೃತಿ, ಪರಂಪರೆಯ ರಾಯಭಾರಿಯಾಗಿ ಪ್ರತಿನಿಧಿಸುತ್ತದೆ. ನಮ್ಮ ದೇಶವಲ್ಲದೆ ಯುಕೆ, ಫಿಜಿ, ಸಿಂಗಾಪುರ, ನೇಪಾಳ, ಮೌರಿಷಶ್, ಸುರಿನಾಮಾ, ಗುಯಾನಾ, ಟ್ರೈನೈಡ್, ಟ್ಯೋಬಾಗೋ, ಕೆನೆಡಾ, ಯುಎಇ, ಸೌದಿ ಅರೇಬಿಯಾ, ಕುವೈತ್, ಮಲೇಷಿಯಾ, ಬಾಂಗ್ಲಾದೇಶ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಹಿಂದಿ ಭಾಷೆ ಬಳಕೆಯಲ್ಲಿದೆ ಎಂದರು.
ಪ್ರತಿವರ್ಷ ಜ-10ರಂದು ‘ವಿಶ್ವ ಹಿಂದಿ ದಿವಸ್’ವನ್ನಾಗಿ ಆಚರಿಸಲಾಗುತ್ತದೆ. ಹಿಂದಿಯನ್ನು ಜಾಗತಿಕ ಭಾಷೆಯನ್ನಾಗಿ ಉತ್ತೇಜಿಸುವುದು ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ. 1975ರಲ್ಲಿ ಮೊದಲ ವಿಶ್ವ ಹಿಂದಿ ಸಮ್ಮೇಳನ ನಾಗಪೂರ್‌ನಲ್ಲಿ ಜರುಗಿತು. 2006ರಲ್ಲಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರು ಈ ದಿನವನ್ನು ಅಧಿಕೃತವಾಗಿ ಘೋಷಿಸಿದರು. ಹಿಂದಿಯು ದೇಶದ ಸಾಂಸ್ಕೃತಿಕ ಏಕತೆ ಮತ್ತು ಅಭಿವ್ಯಕ್ತಿಗೆ ಸೇತುವೆಯಾಗಿದೆ ಎಂದರು.
ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ ಮಾತನಾಡಿ, ಭಾಷೆಯಲ್ಲಿ ಮೇಲು-ಕೀಳು ಸಲ್ಲದು. ಪ್ರತಿಯೊಂದು ಭಾಷೆಗೂ ತನ್ನದೆಯಾದ ಮಹತ್ವವಿದೆ. ಹಿಂದಿಯು ದೇವನಾಗರಿ ಲಿಪಿ ಹೊಂದಿದೆ. ಇದು ಸರಳ ಹಾಗೂ ಜನ ಸಾಮಾನ್ಯರಿಗೆ ತಿಳಿಯುತ್ತದೆ. ನಮ್ಮ ಮಾತೃಭಾಷೆಯನ್ನು ಹೃದಯಾಂತರಾಳದಿಂದ ಪ್ರೀತಿಸಿ, ಅನ್ಯ ಭಾಷೆಗಳನ್ನು ಗೌರವಿಸುವ ಗುಣ ನಮ್ಮದಾಗಬೇಕು. ಅದಕ್ಕಾಗಿ ಭಾಷಾ ಸಾಮರಸ್ಯ ಮೈಗೂಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಚಿಂತಕ ರವಿ ಬಿರಾಜಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸಾಲಿ ಸಂಗೀತಾ, ಶಿಕ್ಷಕಿಯರಾದ ಕಾಶಮ್ಮ ಚಿನಮಳ್ಳಿ, ಶಿಲ್ಪಾ ಖೇಡ್ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.