ವಿಮಾನ ಪ್ರಯಾಣಿಕರ ಗಮನಕ್ಕೆ: ಇನ್ಮುಂದೆ ಫ್ಲೈಟ್‌ನಲ್ಲಿ ಪವರ್ ಬ್ಯಾಂಕ್ ಬಳಕೆಗೆ ನಿಷೇಧ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ನವದೆಹಲಿ
ವಿಮಾನ ಪ್ರಯಾಣದ ವೇಳೆ ಲಿಥಿಯಂ ಬ್ಯಾಟರಿಗಳು ಬೆಂಕಿ ಹತ್ತಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಪವರ್ ಬ್ಯಾಂಕ್‌ಗಳ ಬಳಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಹೊರಡಿಸಿದೆ. ಇತ್ತೀಚೆಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವೊಂದು ಟೇಕ್-ಆಫ್ ಆಗುವ ಮುನ್ನ ಪ್ರಯಾಣಿಕರ ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಯಾವುದೆ ಅನಾಹುತ ಸಂಭವಿಸಿರಲಿಲ್ಲ. ಈ ಘಟನೆಯ ಬೆನ್ನಲ್ಲೆ ಈ ಹೊಸ ‘ಡೆಂಜರಸ್ ಗುಡ್ಸ್ ಅಡ್ವೈಸರಿ ಸರ್ಕ್ಯುಲರ್’ ಜಾರಿಗೆ ಬಂದಿದೆ.

ಹೊಸ ನಿಯಮಗಳು ಏನು ಹೇಳುತ್ತವೆ ?

  • ವಿಮಾನದ ಒಳಗಡೆ ಸೀಟುಗಳ ಬಳಿ ಇರುವ ಪವರ್ ಸಪ್ಲೈ ಸಿಸ್ಟಮ್‌ಗಳಿಗೆ ಪವರ್ ಬ್ಯಾಂಕ್‌ ಸಿಕ್ಕಿಸಿ ಚಾರ್ಜ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
  • ವಿಮಾನ ಹಾರಾಟದ ಸಮಯದಲ್ಲಿ ಪವರ್ ಬ್ಯಾಂಕ್ ಬಳಸಿ ಮೊಬೈಲ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡುವಂತಿಲ್ಲ.
  • ಪವರ್ ಬ್ಯಾಂಕ್‌ಗಳನ್ನು ಲಗೇಜ್ ಬ್ಯಾಗ್‌ನಲ್ಲಿಡುವಂತಿಲ್ಲ, ಬದಲಾಗಿ ಅವುಗಳನ್ನು ಹ್ಯಾಂಡ್ ಬ್ಯಾಗ್‌ನಲ್ಲಿ ಮಾತ್ರ ಇಟ್ಟುಕೊಳ್ಳಬೇಕು. ಆದರೆ ಇವುಗಳನ್ನು ಓವರ್‌ಹೆಡ್ ಬಿನ್ (ತಲೆಯ ಮೇಲಿರುವ ಲಗೇಜ್ ಬಾಕ್ಸ್) ಬದಲಿಗೆ ಪ್ರಯಾಣಿಕರು ತಮ್ಮ ಬಳಿಯೆ ಇಟ್ಟುಕೊಳ್ಳುವುದು ಸುರಕ್ಷಿತ ಎಂಬ ಸೂಚನೆ ನೀಡಲಾಗಿದೆ.
  • ಒಂದು ವೇಳೆ ಯಾವುದೆ ಸಾಧನದಿಂದ ಅತಿಯಾದ ಶಾಖ, ಹೊಗೆ ಅಥವಾ ಅಸಾಮಾನ್ಯ ವಾಸನೆ ಬಂದರೆ ತಕ್ಷಣವೆ ವಿಮಾನದ ಸಿಬ್ಬಂದಿಗೆ ಮಾಹಿತಿ ನೀಡಬೇಕು.

ಹ್ಯಾಂಡ್ ಬ್ಯಾಗ್ ನಿಯಮದ ಬಗ್ಗೆ ಎಚ್ಚರಿಕೆ
ವಿಮಾನಯಾನ ತಜ್ಞರ ಪ್ರಕಾರ, ‘ಒಬ್ಬ ಪ್ರಯಾಣಿಕರಿಗೆ ಒಂದು ಹ್ಯಾಂಡ್ ಬ್ಯಾಗ್’ ಎಂಬ ನಿಯಮವನ್ನು ವಿಮಾನಯಾನ ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ವಿಮಾನದ ಒಳಗಡೆ ಓವರ್‌ಹೆಡ್ ಬಿನ್‌ಗಳು ಭರ್ತಿಯಾದಾಗ, ಸಿಬ್ಬಂದಿಗಳು ಪ್ರಯಾಣಿಕರ ಹ್ಯಾಂಡ್ ಬ್ಯಾಗ್‌ಗಳನ್ನು ಪಡೆದು ವಿಮಾನದ ಕೆಳಭಾಗದ ‘ಬೆಲ್ಲಿ’ ವಿಭಾಗಕ್ಕೆ ರವಾನಿಸುತ್ತಾರೆ. ಹ್ಯಾಂಡ್ ಬ್ಯಾಗ್‌ನಲ್ಲಿ ಪವರ್ ಬ್ಯಾಂಕ್‌ಗಳಿದ್ದರೆ ಮತ್ತು ಅಲ್ಲಿ ಬೆಂಕಿ ಕಾಣಿಸಿಕೊಂಡರೆ ಅದನ್ನು ಪತ್ತೆಹಚ್ಚುವುದು ಕಷ್ಟವಾಗುತ್ತದೆ. ಇದು ವಿಮಾನದ ಸುರಕ್ಷತೆಗೆ ದೊಡ್ಡ ಸವಾಲಾಗಬಹುದು ಎಂದು ಪೈಲಟ್‌ಗಳು ಆತಂಕ ವ್ಯಕ್ತಪಡಿಸಿದ್ದಾರೆ. ವಿಮಾನಗಳಲ್ಲಿ ಒಂದು ಸಣ್ಣ ಅಗ್ನಿ ಅವಘಡ ಸಂಭವಿಸಿದರೂ ಅದನ್ನು ತಡೆಗಟ್ಟುವುದು ಕಷ್ಟಕರ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಲಿಥಿಯಂ ಬ್ಯಾಟರಿ ಅಪಾಯಕಾರಿ ಏಕೆ ?
ಲಿಥಿಯಂ ಬ್ಯಾಟರಿಗಳಿಂದ ಹತ್ತಿಕೊಳ್ಳುವ ಬೆಂಕಿ ಅತ್ಯಂತ ವೇಗವಾಗಿ ಹರಡುತ್ತದೆ ಮತ್ತು ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ತಯಾರಿಕಾ ದೋಷ, ಹಳೆಯ ಬ್ಯಾಟರಿ ಅಥವಾ ಬ್ಯಾಟರಿಗಳು ಅಪ್ಪಳಿಸುವುದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಳ್ಳಬಹುದು. ಇಂತಹ ಬೆಂಕಿಯನ್ನು ಆರಿಸಲು ವಿಶೇಷ ವಿಧಾನಗಳ ಅಗತ್ಯವಿರುತ್ತದೆ ಎಂದು ಡಿಜಿಸಿಎ ತಿಳಿಸಿದೆ. ವಿಮಾನಯಾನ ಸಂಸ್ಥೆಗಳು ಈ ಹೊಸ ನಿಯಮಗಳ ಬಗ್ಗೆ ವಿಮಾನದ ಒಳಗಡೆ ಸತತವಾಗಿ ಘೋಷಣೆಗಳನ್ನು ಮಾಡಬೇಕು ಮತ್ತು ಲಿಥಿಯಂ ಬ್ಯಾಟರಿಗೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಘಟನೆಯನ್ನು ಕೂಡ ಡಿಜಿಸಿಎಗೆ ವರದಿ ಮಾಡಬೇಕೆಂದು ಆದೇಶಿಸಲಾಗಿದೆ.

Leave a Reply

Your email address will not be published. Required fields are marked *