ಬೆಂಗಳೂರು: ಆರ್ಎಸ್ಎಸ್ ಶಾಖೆಗಳಲ್ಲಿ, ಕೇಶವ ಕೃಪಾದಲ್ಲಿ ಸುಳ್ಳಿನ ಕಾರ್ಖಾನೆ ನಡೆಸಿದ್ದಾರೆ. ಇದನ್ನೆ ಆರ್ಎಸ್ಎಸ್ ಇತಿಹಾಸ ಅಂದುಕೊಂಡಿದ್ದಾರೆ ಎಂದು ಆರ್ಎಸ್ಎಸ್ ಮತ್ತು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ವಂದೆ ಮಾತರಂ ಗೀತೆ ರಾಷ್ಟ್ರಗೀತೆ ಆಗಬೇಕಿತ್ತು ಎಂಬ ಸಂಸದ ಕಾಗೇರಿ ಹೇಳಿಕೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆರ್ಎಸ್ಎಸ್ ಅವರಿಗೆ ಅವರ ಇತಿಹಾಸ ಗೊತ್ತಿಲ್ಲ. ಬಿಜೆಪಿ ನಾಯಕರು, ಸ್ವಯಂ ಸೇವಕರು ಆರ್ಎಸ್ಎಸ್ ಪತ್ರಿಕೆ ಆರ್ಗನೈಸರ್ ಲೇಖನ ಓದಲಿ. ಅದನ್ನು ಓದಿದರೆ ನೀವು ಎಷ್ಟು ದೊಡ್ಡ ದೇಶ ದ್ರೋಹಿಗಳು ಅಂತ ಗೊತ್ತಾಗುತ್ತದೆ. ಆರ್ಎಸ್ಎಸ್ ಅವರು ಸಂವಿಧಾನ, ರಾಷ್ಟ್ರಧ್ಜಜ, ರಾಷ್ಟ್ರಗೀತೆ ಯಾವುದಕ್ಕೂ ಗೌರವ ಕೊಟ್ಟಿಲ್ಲ. ಇದೆಲ್ಲಾ ಅವರು ಸೃಷ್ಟಿಸಿರೋ ಇತಿಹಾಸ ಎಂದು ಕಿಡಿಕಾರಿದರು.
ರವೀಂದ್ರನಾಥ್ ಟಾಗೋರ್ ಅವರು ಬ್ರಿಟಿಷರಿಗೋಸ್ಕರ ಜನಗಣಮನ ಬರೆದಿಲ್ಲ. ಇದನ್ನು ಟಾಗೋರ್ ಅವರೆ ಎರಡು ಬಾರಿ ಹೇಳಿದ್ದಾರೆ. ದೇಶಕ್ಕೆ ನಾನು ಬರೆದಿರೋದು ಅಂತ. ಬಿಜೆಪಿ ಅವರು ಓದಲ್ಲ, ವಾಟ್ಸಾಪ್, ಫೇಸ್ಬುಕ್ನಲ್ಲಿ ಬರುತ್ತದೆ. ಆರ್ಎಸ್ಎಸ್ ಶಾಖೆಗಳಲ್ಲಿ, ಕೇಶವ ಕೃಪಾದಲ್ಲಿ ಸುಳ್ಳಿನ ಕಾರ್ಖಾನೆ ನಡೆಸಿದ್ದಾರೆ. ಇದನ್ನೆ ಇವರು ಇತಿಹಾಸ ಅಂದುಕೊಂಡಿದ್ದಾರೆ ಅಂತ ವಾಗ್ದಾಳಿ ನಡೆಸಿದರು.
ನಾವು ಕೇಳಿರುವ ಪ್ರಶ್ನೆಗಳು ಅವರ ಪತ್ರಿಕೆ, ಹಿರಿಯರು ಹೇಳಿರುವ ಮಾತುಗಳಲ್ಲೆ ಇವೆ. ಆರ್ಎಸ್ಎಸ್ ನಾಯಕರ ಮಾತು ಏನು ಅಂತ ಅವರ ಪತ್ರಿಕೆ ಓದಿದರೆ ನಿಮಗೆ ನಾಚಿಕೆ ಬರುತ್ತದೆ. ವಂದೆ ಮಾತರಂನಿಂದ ಅನೇಕರು ಪ್ರೇರಿತರಾಗಿದ್ದರು. ಯುವಕರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಇದಾದ ಮೇಲೆ ಎಲ್ಲರೂ ಕೂತು ಚರ್ಚೆ ಮಾಡಿ, ಗೀತೆ, ಧ್ವಜ, ಎಲ್ಲವನ್ನೂ ಅಂತಿಮ ಮಾಡಿದರು. ಬಿಜೆಪಿಯವರು ಓದುವದಿಲ್ಲ. ಅದಕ್ಕೆ ಹೀಗೆ ಆಗುತ್ತದೆ ಎಂದು ಹರಿಹಾಯ್ದರು.
ಜನರಿಗೆ ಜನಗಣಮನ ಮತ್ತು ವಂದೆ ಮಾತರಂ ಮೇಲೆ ಅಭಿಮಾನ ಇದೆ. ಆರ್ಎಸ್ಎಸ್ ಅವರಿಗೆ ಅಭಿಮಾನ ಇಲ್ಲ. ಆರ್ಎಸ್ಎಸ್ ಅವರು ಸಂವಿಧಾನದ ಬದಲು ಮನುಸ್ಮೃತಿ ತಂದವರು. ತ್ರಿವರ್ಣ ಧ್ವಜ ಅಪಶಕುನ ಅಂತ ಹೇಳಿದ್ರು. ಬಿಜೆಪಿ ಅವರು ಮೊದಲು ಆರ್ಎಸ್ಎಸ್ ಇತಿಹಾಸ ಓದಲಿ ಅಂತ ಬಿಜೆಪಿ – ಆರ್ಎಸ್ಎಸ್ ವಿರುದ್ಧ ಕೆಂಡಕಾರಿದರು.