ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧ ವಿತರಣೆ ಮಾಡುತ್ತಿರುವುದರಿಂದ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳ ಅಗತ್ಯವಿಲ್ಲ ಎಂದು ಸರ್ಕಾರ ಈ ಕ್ರಮ ಕೈಗೊಂಡಿದೆ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರೀಪತಿ ಪಿ.ಕೆ ಅವರು ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳ ವೈದ್ಯರು ರೋಗಿಗಳಿಗೆ ಯಾವುದೆ ಔಷಧಿ ಹೊರಗಿನಿಂದ ಖರೀದಿಸಲು ಶಿಫಾರಸ್ಸು ಮಾಡದಂತೆ ನೋಡಿಕೊಳ್ಳುವುದು ಸರ್ಕಾರದ ನೀತಿಯಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದೊಳಗೆ ಜನಔಷಧಿ ಕೇಂದ್ರ ತೆರೆಯುವುದು ಸರ್ಕಾರದ ನೀತಿಗೆ ವ್ಯತಿರಿಕ್ತವಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನುಮುಂದೆ ಜನೌಷಧಿ ಕೇಂದ್ರಗಳ ಹಂಚಿಕೆ ಸ್ಥಗಿತಗೊಳಿಸಲು ಮತ್ತು ಅದಕ್ಕೆ ಅನುಗುಣವಾಗಿ ಜನೌಷಧಿ ಕೇಂದ್ರಗಳ ಪ್ರಾರಂಭಕ್ಕಾಗಿ ಆಯುಕ್ತಾಲಯದಲ್ಲಿ ಅನುಮೋದನೆಗಾಗಿ ಬಾಕಿ ಇರುವ 31 ಅರ್ಜಿಗಳನ್ನು ತಿರಸ್ಕರಿಸಲು ಅನುಮೋದನೆ ನೀಡಲಾಗಿದೆ. ಆದರೆ ಸರ್ಕಾರಿ ಆಸ್ಪತ್ರೆಗಳ ಹೊರಗೆ ಜನೌಷಧಿ ಕೇಂದ್ರಗಳ ಸ್ಥಾಪನೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರದ ಕಾರಣ ಮುಂದುವರಿಯಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮುಂದುವರೆದು, ಪ್ರಸ್ತುತ ಇಲಾಖೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅಸ್ತಿತ್ವದಲ್ಲಿರುವ ಜನೌಷಧಿ ಕೇಂದ್ರಗಳನ್ನು ಅವರೊಂದಿಗೆ ಮಾಡಿಕೊಂಡಿರುವ ಒಪ್ಪಂದ ನಿಯಮಗಳ ಪ್ರಕಾರ ಸ್ಥಗಿತಗೊಳಿಸಲು ಅಗತ್ಯ ಕ್ರಮವಹಿಸಬೇಕು. ಜೆನೆರಿಕ್ ಔಷಧಿಗಳ ಖರೀದಿಗೆ ಬಿಪಿಪಿಐ ಯೊಂದಿಗೆ ಕೆಎಸ್‌ಎಂಎಸ್‌ಸಿಎಲ್ ಅವರು ವಿಶೇಷ ದರಗಳನ್ನು ರೂಪಿಸಲು ಸೂಚಿಸಿದೆ. ಪರ್ಯಾಯವಾಗಿ, ಆಸ್ಪತ್ರೆಗಳು ಬಿಪಿಪಿಐ ಯಿಂದ ಔಷಧ ಖರೀದಿಸಿ ರೋಗಿಗಳಿಗೆ ಉಚಿತವಾಗಿ ವಿತರಿಸಲು ಕ್ರಮವಹಿಸತಕ್ಕದ್ದು ಎಂಬುದಾಗಿ ತಿಳಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಹಾಗೂ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸುಮಾರು 200 ಜನೌಷಧಿ ಮಳಿಗೆಗಳನ್ನು ಸ್ಥಾಪಿಸಲು ಈ ಹಿಂದೆ ಸರ್ಕಾರ ಅನುಮತಿ ನೀಡಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು ಬ್ರಾಂಡೆಡ್ ಔಷಧಗಳನ್ನು ರೋಗಿಗಳಿಗೆ ಸಲಹಾ ಚೀಟಿ ರೂಪದಲ್ಲಿ ನೀಡುವುದು ನಿಷೇಧಿಸಲಾಗಿತ್ತು. ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿರದ ಔಷಧಗಳನ್ನು ಸಲಹಾ ಚೀಟಿಯನ್ನು Generic ಹೆಸರಿನಲ್ಲಿ ಬರೆಯಲು ಕಡ್ಡಾಯವಾಗಿ ಸೂಚಿಸಲಾಗಿತ್ತು. ಈ ಔಷಧಗಳನ್ನು ಆರೋಗ್ಯ ಸಂಸ್ಥೆಯ ಆವರಣದಲ್ಲಿ ಸ್ಥಾಪಿಸಿರುವ ಜನೌಷಧಿ ಮಳಿಗೆಯಲ್ಲಿ ಕಡಿಮೆ ದರದಲ್ಲಿ ಔಷಧಿ ಸಿಗುವ ಬಗ್ಗೆ ರೋಗಿಗಳಿಗೆ ವಿವರಿಸಿ ಅಲ್ಲಿಂದ ಆ ಔಷಧಿಗಳನ್ನು ಖರೀದಿಸಲು ಸಲಹೆ ನೀಡುವಂತೆ ಸಹ ಸೂಚಿಸಲಾಗಿತ್ತು.
ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಸ್ತುತ 207 ಜನೌಷಧಿ ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ. ಪ್ರಸ್ತುತ ಜನೌಷಧಿ ಕೇಂದ್ರಗಳ ಸ್ಥಾಪನೆಗೆ 31 ಅರ್ಜಿಗಳು ಆಯುಕ್ತರ ಹಂತದಲ್ಲಿ ಬಾಕಿ ಇರುತ್ತವೆ. ಸದರಿ ಜನೌಷಧಿ ಕೇಂದ್ರಗಳ ಸ್ಥಾಪನೆಗೆ ಸಂಬಂಧಿಸಿದ ಈಗಿನ ನೀತಿಯು, ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ಹಳೆಯದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚಲು ರಾಜ್ಯ ಸರ್ಕಾರ ಆದೇಶಿಸಿದೆ.