ಕಲಬುರಗಿ: ಹಿಂಗಾರು ಬಿತ್ತನೆ ಕಾಲ ಪ್ರಾರಂಭವಾಗಿದ್ದು, ಪ್ರಮುಖವಾಗಿ ಜೋಳ, ಕಡಲೆ, ಕುಸುಬೆ, ಗೋದಿ ಬಿತ್ತನೆ ಮಾಡಲಾಗುತ್ತದೆ. ರೈತರು ಬೀಜದ ಪ್ರಮಾಣ, ರಸಗೊಬ್ಬರ ಬಳಕೆ, ಬಿತ್ತನೆಯ ವಿಧಾನ ಅನುಸರಿಸುವ ಮೂಲಕ ಉತ್ತಮ ಸಾಗುವಳಿ ಕ್ರಮಗಳ ಮೂಲಕ ಬಿತ್ತನೆ ಮಾಡುವುದು ಅಗತ್ಯವಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ ರೈತರಿಗೆ ಸಲಹೆ ನಿಡಿದರು.
ಆಳಂದ ರಸ್ತೆಯ ಟೋಲಗೇಟ್ ಸಮೀಪದ ಇಟಗಿಯವರ ತೋಟದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ರೈತರಿಗೆ ಹಿಂಗಾರು ಬಿತ್ತನೆಯ ಸಲಹೆಗಳು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೋಳ ಬಿತ್ತನೆಗೆ ಸಂಬಂಧಿಸಿದಂತೆ ಒಂದು ಎಕರೆಗೆ ಮೂರು ಕೆಜಿಯಷ್ಟು ಬೀಜ ಮತ್ತು ಎರಡು ಗ್ರಾಮ್ ಗಂಧಕದಿಂದ ಬಿತ್ತಬೇಕು. ಪ್ರತಿ ಎಕರೆಗೆ 20 ಕೆಜಿ ಸಾರಜನಕ, 10 ಕೆಜಿ ರಂಜಕ ಒದಗಿಸುವ ಗೊಬ್ಬರ ಬಳಸಬೇಕು. ಬಿತ್ತನೆಯನ್ನು 18 ಅಂಗುಲಗಳ ಸಾಲಗಳಲ್ಲಿ ಮಾಡಬೇಕು. ಬಿತ್ತಿದ 10-15 ದಿವಸಗಳಲ್ಲಿ ದಟ್ಟವಿರುವ ಸಸಿಗಳನ್ನು ಕೀಳಬೇಕು. ಬಿತ್ತನೆಯ 30 ದಿವಸಗಳ ನಂತರ ಪ್ರತಿ 10-15 ದಿವಸಗಳ ಅಂತರದಲ್ಲಿ 3-4 ಸಲ ಎಡೆ ಹೊಡೆಯಬೇಕು. ಮಿಡತೆಗಳ ಹಾವಳಿ ತಡೆಯಲು ಬಿತ್ತನೆ ಮಾಡಿದ 15 ದಿವಸಗಳ ನಂತರ ಎಕರೆಗೆ 8-10 ಕೆಜಿ ಬಿ.ಎಚ್.ಸಿ ಮತ್ತು ಶೇ.5ರ ಮೆಲಾಥಿಯಾನ್ ಅಥವಾ ಶೇ.4ರಷ್ಟು ಎಂಡೋ ಸಲ್ಫಾನ್ ಧೂಳನ್ನು ಧೂಳಿಕರಿಸಬೇಕು. ಸಾಧ್ಯವಿದಲ್ಲಿ ನೀರುಣಿಸಬೇಕು ಎಂದರು.
ಕಡಲೆ ಬೀಜಕ್ಕೆ ರೈಜೋಬಿಯಂ ಉಪಚಾರ ಪ್ರಮುಖವಾಗಿದೆ. ಜೈವಿಕ ಗೊಬ್ಬರ ಬಳಕೆ ಅಗತ್ಯ. ಕುಸುಬೆ ಬೀಜದಲ್ಲಿ ಪ್ರಮುಖವಾಗಿ ಅಣ್ಣಿಗೇರಿ ಬಳಸಬೇಕು. ಒಣ ಬೇಸಾಯದಲ್ಲಿ ಒಂದು ಹೆಕ್ಟರಿಗೆ 7.5 ಕೆಜಿ ಬೀಜ ಬೇಕಾಗುತ್ತದೆ. 55 ಕೆಜಿ ಸಾರಜನಕ, 50 ಕೆಜಿ ರಂಜಕ, 25 ಕೆಜಿ ಪೊಟ್ಯಾಶಿಯಂ ನೀಡಬೇಕು. ಬಿತ್ತನೆ ಬೀಜಗಳನ್ನು 2 ಗ್ರಾಮ್ ಕ್ಯಾಪ್ಟನ್ ಅಥವಾ ಥೈರಾಂದಿಂದ ಉಪಚರಿಸಬೇಕು. ಬೀಜವನ್ನು 30 ಸೆಂಟಿ ಮೀಟರ್ ಅಂತರದಲ್ಲಿ ಬಿತ್ತಬೇಕು. ಬಿತ್ತನೆಯ ನಂತರ 7-8 ವಾರಗಳ ನಂತರ ಎಡೆ, ಕುಂಟೆ ಹೊಡೆಯಬೇಕು. ಗೋದಿಯು ಅಕ್ಟೋರ್ ಎರಡನೇ ವಾರದಿಮದ ನವ್ಹೆಂಬರ್ ಎರಡನೇ ವಾರದೊಳಗೆ ಬಿತ್ತನೆ ಮಾಡಬೇಕು. ಪ್ರತಿ ಹೆಕ್ಟರಗೆ 150 ಕೆಜಿಯಷ್ಟು ಬೀಜ, 100 ಕೆಜಿ ರಸಗೊಬ್ಬರ ಬಳಸಬೇಕು. 100 ಕೆಜಿ ಕಾರ್ಬಾಕ್ಸಿನ್‌ದಿಂದ ಬೀಜೋಪಚಾರ ಮಾಡಬೇಕು ಎಂದು ಅನೇಕ ಸಲಹೆ-ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅದ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ್, ಸಮಾಜ ಸೇವಕ ಅಸ್ಲಾಂ ಶೇಖ್, ರೈತರಾದ ಚಂದ್ರಶ್ಯಾ ಇಟಗಿ, ಶರಣಬಸಪ್ಪ ಇಟಗಿ, ಶ್ರೀಶೈಲ್ ಕಲಬುರಗಿ, ಶಿವಶರಣ ಕಾರಬಾರಿ, ಮಲ್ಲಿಕಾರ್ಜುನ ಬಿ.ಇಟಗಿ, ಮಲ್ಲಿಕಾರ್ಜುನ ಜಿ.ಇಟಗಿ, ರಾಜು ಕಮ್ಮನ್ ಸೇರಿದಂತೆ ಅನೇಕರು ಇದ್ದರು.