ಕಲಬುರಗಿ: ಕನ್ನಡದ “ಕಡಲತೀರದ ಭಾರ್ಗವ” ಎಂದೆ ಪ್ರಸಿದ್ಧರಾದ ಡಾ.ಕೆ.ಶಿವರಾಮ ಕಾರಂತರು ಕನ್ನಡ ಸಾಹಿತ್ಯದ ಮೇರು ವ್ಯಕ್ತಿ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ ಮತ್ತು ವೈಜ್ಞಾನಿಕ ಬರಹಗಾರ. ಕನ್ನಡಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ್ ಹೇಳಿದರು.
ಜಿಲ್ಲೆಯ ಜೇವರ್ಗಿ ಪಟ್ಟಣದ ಶಹಾಪುರ ರಸ್ತೆಯಲ್ಲಿನ ನರೇಂದ್ರ ಪದವಿ ಪೂರ್ವ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಡಾ.ಕೆ.ಶಿವರಾಮ ಕಾರಂತರ 123ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಾರಂತರು 200ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಯಕ್ಷಗಾನ ಬಯಲಾಟಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಸ್ವೀಡನ್ ಪ್ರಶಸ್ತಿಗಳು ಲಭಿಸಿವೆ. ಕಡಲತೀರದ ಭಾರ್ಗವ’, ‘ನಡೆದಾಡುವ ವಿಶ್ವಕೋಶ’ ಎಂದು ಖ್ಯಾತರಾಗಿದ್ದರು. ಕಾದಂಬರಿ, ಕವಿ, ನಾಟಕ, ವೈಜ್ಞಾನಿಕ ಬರಹ, ಅನುವಾದ, ವೈಚಾರಿಕ ಬರಹ, ಕಥೆ, ಬಾಲಸಾಹಿತ್ಯ ಹೀಗೆ ಅನೇಕ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ ಎಂದರು.
ಜ್ಞಾನಪೀಠ ಪ್ರಶಸ್ತಿ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಸಹಕಾರ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ಇವರು, ಸ್ವಾತಂತ್ರ್ಯ ಚಳವಳಿಗಳಲ್ಲಿ ಸಕ್ರಿಯರಾಗಿದ್ದರು. ‘ಬಾಲವನ’ ಎಂಬ ಮಕ್ಕಳ ತೋಟವನ್ನು ನಿರ್ವಹಿಸಿದ್ದರು. ಅವರ ಅಪಾರ ಕೃತಿಗಳು ಹಾಗೂ ಅಪರಿಮಿತ ಜ್ಞಾನದಿಂದಾಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಕಾಲೇಜಿನ ಪ್ರಾಚಾರ್ಯರಾದ ದೇವಣ್ಣಗೌಡ ಪಾಟೀಲ್ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಮಹನೀಯರ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಾಯಣ್ಣ ಕಟ್ಟಿಮನಿ, ಶಿವಾನಂದ ಬಡಿಗೇರ, ಸಂಪತಕುಮಾರ ಕಟ್ಟಿಮನಿ, ಶಾಂತಕುಮಾರ ಕುರಡೇಕರ್, ಸೇವಕಿ ಸರಸ್ವತಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.