ಚಿತ್ತಾಪುರ: ನ್ಯಾ.ಎಚ್.ಎನ್ ನಾಗಮೋಹನ್ ದಾಸ್ ಒಳಮೀಸಲಾತಿ ವರದಿ ಅವೈಜ್ಞಾನಿಕ ಎಂಬ ಜಿ.ಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಆರೋಪ ಸತ್ಯಕ್ಕೆ ದೂರ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಹೊಸೂರಕರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಗಸ್ಟ್ 19ರ ವಿಶೇಷ ಸಂಪುಟ ಸಭೆಯಲ್ಲಿ ಒಳ ಮಿಸಲಾತಿ ಜಾರಿಗೆ ಅಂತಿಮ ತೀರ್ಮಾನ ಸರ್ಕಾರ ಕೈಗೊಳ್ಳಲೇಬೇಕು. ಇಲ್ಲವಾದರೆ ರಾಜ್ಯದ 29 ಸಾವಿರ ಹಳ್ಳಿಗಳಲ್ಲಿ ಅಸ್ಪೃಶ್ಯ ಸಮಾಜದವರು ಬೀದಿಗಿಳಿದು ಮಾಡು ಇಲ್ಲವೇ ಮಡಿ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಒಳಮೀಸಲಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರವೇ ಈ ಹಿಂದೆ ರಚಿಸಿದ ಹಾವನೂರು ಆಯೋಗ ಎ.ಜೆ ಸದಾಶಿವ ಆಯೋಗ ಕಾಂತರಾಜ್ ಆಯೋಗ ಮತ್ತು ಎಚ್.ಎನ್ ನಾಗಮೋಹನ ದಾಸ್ ಆಯೋಗ ಸಲ್ಲಿಸಿರುವ ವರದಿಗಳ ಜೊತೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಕ್ಷಣೆಯಾದ ಮಾಧುಸ್ವಾಮಿ ವರದಿ ಇದೆ ಈ ಐದು ವರದಿಯಲ್ಲಿ ಯಾವುದಾದರೊಂದು ವರದಿಯನ್ನು ಸರ್ಕಾರ ಒಪ್ಪಿಕೊಳ್ಳಲೇಬೇಕು. ಅಗತ್ಯವಿದ್ದರೆ ವರದಿಯಲ್ಲಿ ತಿದ್ದುಪಡಿ ಮಾಡಿಯಾದರು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಒಳಮೀಸಲಾತಿ ನೀಡಬೇಕು ಎಂಬುದರ ಹಿಂದೆ ಯಾವುದೇ ರಾಜಕೀಯ ಅಜೆಂಡಾ ಅಲ್ಲ, ಇದು ಅಸ್ಪೃಶ್ಯ ಸಮಾಜದ ಸಮಸ್ಯೆಯಾಗಿದೆ ಸಾಮಾಜಿಕ ನ್ಯಾಯಕ್ಕಾಗಿ ಪಕ್ಷಾತೀತವಾಗಿ ರಾಜ್ಯಾದ್ಯಂತ ಹೋರಾಟ ಮಾಡಲಾಗಿದೆ ಎಂದರು.
ಕೊಟ್ಟ ಮಾತಿನಂತೆ ಸರ್ಕಾರ ಶೀಘ್ರದಲ್ಲಿ ನ್ಯಾ.ಎಚ್.ಎನ್ ನಾಗಮೋಹನ್ ದಾಸ್ ಒಳಮೀಸಲಾತಿ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.