ಹುಬ್ಬಳ್ಳಿ,: ಜಗತ್ತಿನಲ್ಲಿ ಸಯಾಮಿ ಮಕ್ಕಳ ಜನನ ಸೇರಿದಂತೆ ಅನೇಕ ಅಪರೂಪದ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇರುತ್ತವೆ. ಆದರೆ ಹುಬ್ಬಳ್ಳಿಯ ಕಿಮ್ಸ್ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಎರಡನೇ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯು ಜನ್ಮ ನೀಡಿದ ಮಗುವಿನೊಳಗೊಂದು ಭ್ರೂಣ ಇರೋದು ಪತ್ತೆಯಾಗಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗರ್ಭಿಣಿಯೊಬ್ಬರು ಎರಡನೇ ಹೆರಿಗೆಗೆಂದು ಕಿಮ್ಸ್ ನ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ದಾಖಲಾಗಿದ್ದರು. ಕಳೆದ ಸೆಪ್ಟಂಬರ್ 23ರಂದು ಗಂಡು ಮಗುವಿಗೆ ಈಕೆ ಜನ್ಮ ನೀಡಿದ್ದಾಳೆ. ಮಗುವಿನ ದೇಹದಲ್ಲಿ ಕೆಲ ಬದಲಾವಣೆಗಳು ಕಂಡು ಬಂದ ಹಿನ್ನಲೆಯಲ್ಲಿ ನವಜಾತ ಶಿಶುವಿಗೆ ಆಲ್ಟ್ರಾಸೌಂಡ್ ಮಾಡಿಸಲಾಗಿದೆ. ಈ ವೇಳೆ ಮಗುವಿನ ಹೊಟ್ಟೆಯಲ್ಲಿ ಬೆನ್ನುಹುರಿ ಇರುವ ಭ್ರೂಣ ಪತ್ತೆಯಾಗಿದೆ. ಆದರೂ ಎಂಆರ್‌ಐ ಸ್ಕ್ಯಾನ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಅಂತಿಮ ವರದಿ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸೋದಾಗಿ ತಿಳಿಸಿದ್ದು, ಇದೊಂದು ಅಪರೂಪದ ಪ್ರಕರಣ ಎಂದು ಹುಬ್ಬಳ್ಳಿ ಕಿಮ್ಸ್ ನ ವೈದ್ಯಕೀಯ ಅಧೀಕ್ಷಕ ಡಾ.ಈಶ್ವರ ಹಸಬಿ ಅಭಿಪ್ರಾಯಪಟ್ಟಿದ್ದಾರೆ.
ಏನಿದು Fetus in fetu ?
ಹುಟ್ಟುವಾಗಲೇ ನವಜಾತ ಶಿಶುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣದ ಬೆಳವಣಿಗೆ ಆಗುವುದನ್ನ ವೈದ್ಯಕೀಯ ಭಾಷೆಯಲ್ಲಿ Fetus in fetu ಎಂದು ಕರೆಯಲಾಗುತ್ತದೆ. ಇದು ನವಜಾತ ಶಿಶುವಿನ ದೇಹದೊಳಗೆ ಅಸಹಜ ದ್ರವ್ಯರಾಶಿ ಬೆಳೆಯುವ ಅಪರೂಪದ ಸ್ಥಿತಿಯಾಗಿದೆ. ಈ ರೀತಿಯ ಪ್ರಕಣಗಳು ಅತ್ಯಂತ ವಿರಳವಾಗಿದ್ದು, ಜಗತ್ತಿನಾದ್ಯಂತ ಈವರೆಗೆ ಕೇವಲ ಬೆರಳೆಣಿಕೆಯಷ್ಟು ಕೇಸ್ ಮಾತ್ರ ಪತ್ತೆಯಾಗಿವೆ. ಸಯಾಮಿ ಅವಳಿಗಳಿಗಳಿಗೂ ಈ ರೀತಿಯ ಪ್ರಕರಣಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಸಂಯೋಜಿತ ಅವಳಿಗಳು ಗರ್ಭದಿಂದಲೇ ಶರೀರವನ್ನು ಜೋಡಿಸಿಕೊಂಡು ಹುಟ್ಟುತ್ತವೆ. ಸುಮಾರು 2 ಲಕ್ಷ ಜನನ ಕ್ರಿಯೆಯಲ್ಲಿ 1 ಸಯಾಮಿ ಅವಳಿಗಳು ಜನಿಸುವ ಸಾಧ್ಯತೆಯನ್ನು ಈವರೆಗೆ ಅಂದಾಜಿಸಲಾಗಿದೆ.