ಚಿತ್ತಾಪುರ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ ಕಲಬುರಗಿ ಜಿಲ್ಲೆಯ ಶ್ರೀಕ್ಷೇತ್ರ ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಹಿಂದಿನ ಪೀಠಾಧಿಪತಿ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಹಾಗೂ ಪ್ರಸ್ತುತ ಪೀಠಾಧಿಪತಿ ಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಜನ್ಮದಿನೋತ್ಸವ ಕಾರ್ಯಕ್ರಮ ಬುಧವಾರ ಆಯುಧ ಪೂಜೆಯ ದಿನದಂದು ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀಮಠದ ಸಹಸ್ರಾರು ಸದ್ಭಕ್ತರು ಶ್ರೀಗಳ ಜನ್ಮದಿನಾಚರಣೆ ಕಾರ್ಯಕ್ರಮ ಅದ್ಧೂರಿಯಾಗಿ ಆಚರಣೆ ಮಾಡಲು ಎಲ್ಲಾ ಸಿದ್ಧತೆಗಳು ಮಾಡಿಕೊಂಡಿದ್ದರು.ಆದರೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಅನ್ನದಾತ ರೈತ ಸಂಕಷ್ಟದಲ್ಲಿರುವಾಗ ಅದ್ಧೂರಿಯಾಗಿ ಸಂಭ್ರಮಾಚರಣೆ ಸರಿಯಲ್ಲ ಎಂದು ನಿರ್ಧರಿಸಿ ಸರಳವಾಗಿ ಪುಣ್ಯಸ್ಮರಣೋತ್ಸವ ಹಾಗೂ ಜನ್ಮದಿನೋತ್ಸವ ಕಾರ್ಯಕ್ರಮಗಳು ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಬುಧುವಾರ ಆಯುಧ ಪೂಜೆ ದಿನದಂದು ಬೆಳಿಗ್ಗೆ ಕರ್ತೃ ಕೋರಿಸಿದ್ದೇಶ್ವರರ ಗದ್ದುಗೆಗೆ ವಿಶೇಷ ಪೂಜೆ ನಡೆಯಲಿದ್ದು, ಪುಣ್ಯಸ್ಮರಣೆ ಅಂಗವಾಗಿ ರಾತ್ರಿ, ಶ್ರೀಮಠದ ಹಿಂದಿನ ಪೀಠಾಧಿಪತಿ ಪವಾಡ ಪುರುಷ ಲೀಲಾಮೂರ್ತಿ,ಲಿಂಗೈಕ್ಯ. ತೋಟೇಂದ್ರ ಶಿವಯೋಗಿಗಳ ಕರ್ತೃ ಗದ್ದುಗೆಗೆ ವಿಶೇಷ ರುದ್ರಾಭಿಷೇಕ, ಮಹಾಮಂಗಳಾರತಿ ನಡೆಯಲಿದೆ.
ಪ್ರಸ್ತುತ ಪೀಠಾಧಿಪತಿ ಪೂಜ್ಯ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಜನ್ಮದಿನದ ಪ್ರಯುಕ್ತ ಭಕ್ತರಿಂದ ಭಕ್ತಿಸಮರ್ಪಣೆ, ಶ್ರೀಮಠದ ಸೇವಾ ನಿರತ ಸದ್ಭಕ್ತರಿಗೆ ಗುರುರಕ್ಷೆ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಹಿಂದಿನ ಪೀಠಾಧಿಪತಿಗಳ ಪುಣ್ಯಸ್ಮರಣೋತ್ಸವ ಹಾಗೂ ಪ್ರಸ್ತುತ ಪೀಠಾಧಿಪತಿಗಳ ಜನ್ಮದಿನ ಒಂದೇ ದಿನ ಬರುವುದು ನಾಲವಾರ ಮಠದ ವೈಶಿಷ್ಟ್ಯ.
ಇಂತಹ ವೈಶಿಷ್ಟ್ಯಪೂರ್ಣ ಸಮಾರಂಭ ಪ್ರತಿವರ್ಷ ರಾಷ್ಟ್ರದ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ರೈತರ ನೋವಿನ ಮಧ್ಯೆ ಸಂಭ್ರಮಾಚರಣೆ ರದ್ದುಗೊಳಿಸಿ ಕೇವಲ ಧಾರ್ಮಿಕ ವಿಧಿ ವಿಧಾನಗಳ ಆಚರಿಸಿ ಕಾರ್ಯಕ್ರಮ ಮಾಡಲಾಗುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗುರುವಿನ ದರ್ಶನಾಶೀರ್ವಾದ ಪಡೆಯಲು ಮಹಾದೇವ ಗಂವ್ಹಾರ ಮನವಿ ಮಾಡಿದ್ದಾರೆ.