ರಂಗಭೂಮಿ ಉಳಿಸಿ ಬೆಳೆಸುವ ಸವಾಲಿನ ಕಾರ್ಯ ಮಾಡಬೇಕು

ಜಿಲ್ಲೆ

ಕಲಬುರಗಿ: ಆಧುನಿಕತೆ, ವಿದೇಶಿ ಸಂಸ್ಕೃತಿಯ ಅನುಕರಣೆ ಮತ್ತು ಎಲೆಕ್ಟ್ರಾನಿಕ್ಸ್ ಮಾಧ್ಯಮಗಳ ಪ್ರಭಾವದಲ್ಲಿ ರಂಗಭೂಮಿ ಸಂದಿಗ್ದ ಪರಿಸ್ಥಿತಿಯಲ್ಲಿದೆ. ಜನರು ನಾಟಕ ನೋಡುವುದು, ರಂಗಭೂಮಿ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಅಗತ್ಯ. ಪ್ರಸ್ತುತ ಸಂದರ್ಭದಲ್ಲಿ ರಂಗಭೂಮಿ ಉಳಿಸಿ-ಬೆಳೆಸುವುದು ಸವಾಲಿನ ಕಾರ್ಯವಾಗಿದ್ದು, ಇದನ್ನು ಜವಾಬ್ದಾರಿಯಿಂದ ಮಾಡಬೇಕಾಗಿದೆ ಎಂದು ಹಿರಿಯ ರಂಗಭೂಮಿ ಕಲಾವಿದ, ನಾಟಕ ರಚನಾಕಾರ ಹಣಮಂತರಾಯ ಮಂಗಾಣೆ ಮಾರ್ಮಿಕವಾಗಿ ಹೇಳಿದರು.

ನಗರದ ಕಸ್ತೂರಿ ನಗರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಜರುಗಿದ ‘ವಿಶ್ವ ರಂಗಭೂಮಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿರುವ ವರದಕ್ಷಿಣೆ, ಭಯೋತ್ಪಾದನೆ, ಅನೀತಿ, ಶೋಷಣೆ, ಮೂಢನಂಬಿಕೆ, ಕಂದಾಚಾರ, ಅಂಧಶೃದ್ಧೆಯಂತಹ ಸಮಸ್ಯೆಗಳ ಪರಿಣಾಮ ಮತ್ತು ಪರಿಹಾರ ಸಮಾಜಕ್ಕೆ ನೈಜವಾಗಿ ತೋರಿಸುವ ಮೂಲಕ ಜನಜಾಗೃತಿ ಮೂಡಿಸುತ್ತವೆ. ಮಾನವೀಯ ಮೌಲ್ಯಗಳಾದ ಸಂಸ್ಕಾರ, ಸತ್ಯ, ಶಾಂತಿ, ಪ್ರೀತಿ, ಬಾಂದವ್ಯ ವೃದ್ಧಿಗೆ ನಾಟಕಗಳು ಪೂರಕವಾಗಿ ಕಾರ್ಯನಿರ್ವಹಿಸುವ ಮೂಲಕ ಸಾಮಾಜಿಕ ಪರಿವರ್ತನೆ ಮಾಡುತ್ತವೆ ಎಂದರು.

ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ಉತ್ತರ ಕರ್ನಾಟಕ ರಂಗಭೂಮಿಯ ತವರೂರಿದ್ದಂತೆ. ವಿಶೇಷವಾಗಿ ದೇಶಿ ಭಾಷೆಯ ನಾಟಕಗಳು ನಮ್ಮಲ್ಲಿ ಕಂಡುಬರುತ್ತವೆ. ರಂಗಭೂಮಿಯು ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸುತ್ತದೆ. ನಾಟಕ ರಚನೆ ಕಷ್ಟದ ಕೆಲಸವಾಗಿದ್ದು, ನಮ್ಮ ಭಾಗದ ರಂಗಭೂಮಿ ಸಾಹಿತಿಗಳಿಗೆ ಅಂತಹ ಕಷ್ಟದ ಕೆಲಸ ಸರಳವಾಗಿ ಮಾಡುವ ಕಲೆ ಕರಗತಮಾಡಿರುವುದೇ ವಿಶೇಷವಾಗಿದೆ. ರಂಗಭೂಮಿ ನೆಡದಾಡುವ ವಿಶ್ವವಿದ್ಯಾಲಯವಾಗಿದೆ. ವಾಸ್ತವ ಸ್ಥಿತಿಯನ್ನು ದೊಡ್ಡದು ಅಥವಾ ಚಿಕ್ಕದಾಗಿ ಹೇಳದೆ, ಇರುವುದನ್ನು, ಇರುವ ಹಾಗೆಯೇ ಹೇಳುವ ರಂಗಭೂಮಿ, ಸಮಾಜದ ನೈಜ ಪ್ರತಿಬಿಂಬವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಳಗದ ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕ ಅಣ್ಣಾರಾಯ ಎಚ್.ಮಂಗಾಣೆ, ವೀರೇಶ್, ಶರಣಬಸಪ್ಪ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *