ವಿಜಯಪುರ: ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಮಾಸುವ ಮುನ್ನವೆ ಮತ್ತೊಂದು ಬ್ಯಾಂಕ್‌ನಲ್ಲಿ ಕಳ್ಳರು ಕೈಚಳಕ ತೋರಿಸಿರುವ ಘಟನೆ ನಡೆದಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಲ್ಲಿ ದರೋಡೆ ನಡೆದಿದೆ.
ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್, ಮಾರಕಾಸ್ತ್ರಗಳನ್ನು ತೋರಿಸಿ ಕಟ್ಟಿಹಾಕಿ ಕಳ್ಳರು ಕಳ್ಳತನ ಮಾಡಿದ್ದಾರೆ. ಬ್ಯಾಂಕ್ ವಹಿವಾಟು ಸಮಯ ಮುಗಿದ ಮೇಲೆ ಬ್ಯಾಂಕ್‌ಗೆ 5ಕ್ಕೂ ಹೆಚ್ಚು ಮುಸುಕುಧಾರಿಗಳು ನುಗ್ಗಿ ಈ ಕೃತ್ಯ ಎಸಗಿದ್ದಾರೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಂಕ್‌ನಲ್ಲಿ ಎಷ್ಟು ಹಣ ಕಳ್ಳತನವಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಅಂದಾಜು 8 ಕೋಟಿ ರೂ. ನಗದು ಹಣ ಮತ್ತು ಸುಮಾರು 50 ಕೆಜಿಗೂ ಆಧಿಕ ಚಿನ್ನಾಭರಣ ದರೋಡೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸರು ಬ್ಯಾಂಕಿನ ಸಿಸಿ ಕ್ಯಾಮೆರಾ ಮತ್ತು ಹಾರ್ಡ್ ಡಿಸ್ಕ್ ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರ ಸಂಪರ್ಕಿಸುವ ಹಾಗೂ ಚಡಚಣದ ಇತರೆ ರಸ್ತೆಗಳಿಗೂ ಪೊಲೀಸರು ನಾಕಾ ಬಂದಿ ಹಾಕಿ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬ್ಯಾಂಕ್‌ನಲ್ಲಿ ಚಿನ್ನಾಭರಣ ಇಟ್ಟ ಗ್ರಾಹಕರಲ್ಲಿ ಆತಂಕ ಎದುರಾಗಿದ್ದು ಭಾರಿ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಜಮಾವಣೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಜನರನ್ನು ಚದುರಿಸುವ ಕೆಲಸ ಮಾಡುತ್ತಿದ್ದಾರೆ.