5ನೇ ತರಗತಿ ವಿದ್ಯಾರ್ಥಿಯ ಕಣ್ಣುಗುಡ್ಡೆ ಕಿತ್ತ 1ನೇ ತರಗತಿ ವಿದ್ಯಾರ್ಥಿ

ರಾಜ್ಯ

ಬಾಗಲಕೋಟೆ: ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ಗಲಾಟೆಯಲ್ಲಿ ಓರ್ವ ವಿದ್ಯಾರ್ಥಿ ಕಣ್ಣುಗುಡ್ಡೆ ಕಳೆದುಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ನಡೆದಿದೆ.

ಢವಳೇಶ್ವರ ಗ್ರಾಮದ ಮೊರಬದ ತೋಟದ ವಸತಿ ಶಾಲೆಯಲ್ಲಿ 1ನೇ ಕ್ಲಾಸ್ ಓದುತ್ತಿರುವ ಭೀಮಪ್ಪ ಮತ್ತು 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮರ್ಥ ನಡುವೆ ಪೆನ್ನಿನ ವಿಚಾರಕ್ಕೆ ಗಲಾಟೆಯಾಗಿದ್ದು, ಈ ವೇಳೆ ಭೀಮಪ್ಪ ಕಟ್ಟಿಗೆಯಿಂದ ಸಮರ್ಥನ ಬಲಗಣ್ಣಿಗೆ ಇರಿದಿದ್ದಾನೆ. ಇದರಿಂದ ತೀವ್ರ ಗಾಯಗೊಂಡಿರುವ ಸಮರ್ಥನಿಗೆ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ವೈದ್ಯರು ಕಣ್ಣುಗುಡ್ಡೆಯನ್ನೆ ತೆಗೆದಿದ್ದಾರೆ.

ವಿದ್ಯಾರ್ಥಿಗಳ ನಡುವೆ ಗಲಾಟೆ ಆಗಿದ್ದೆಕೆ ?
1ನೇ ತರಗತಿ ವಿದ್ಯಾರ್ಥಿ ಭಿಮಪ್ಪ ಲೋಕುರೆಗೆ 5ನೇ ತರಗತಿ ವಿದ್ಯಾರ್ಥಿ ಸಮರ್ಥ್ ಪೆನ್ ನೀಡಿದ್ದ. ಅದನ್ನು ವಾಪಸ್ ಕೇಳಿದ್ದಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿಯಾಗಿದೆ, ಈ ವೇಳೆ ವಿದ್ಯಾರ್ಥಿ ಭಿಮಪ್ಪ, ಕಟ್ಟಿಗೆಯಿಂದ ಸಮರ್ಥನ ಕಣ್ಣಿಗೆ ತಿವಿದಿದ್ದಾನೆ. ಇದರಿಂದ ಗಾಯಗೊಂಡ ಸಮರ್ಥ್​​’ನನ್ನು ಕೂಡಲೇ ಬೆಳಗಾವಿ ಜಿಲ್ಲೆ ಅಥಣಿ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ, ಬಲಗಣ್ಣಿಗೆ ಗಂಭೀರ ಗಾಯವಾಗಿದ್ದರಿಂದ ಕಣ್ಣು ಗುಡ್ಡೆಯನ್ನು ತಗೆಯಬೇಕಾಗಿದೆ. ಕಣ್ಣು ಗುಡ್ಡೆ ಕಳೆದುಕೊಂಡ ಮಗನ ಸ್ಥಿತಿ ಕಂಡು ಪೋಷಕರು ಕಂಗಾಲಾಗಿದ್ದಾರೆ.

ಘಟನೆ ಬಗ್ಗೆ ಮುಖ್ಯ ಶಿಕ್ಷಕಿ ಜಯಶ್ರೀ ನಡುವಿನಕೇರಿ, ಅತಿಥಿ ಶಿಕ್ಷಕಿ ಶಿಲ್ಪಾ ಅಂಬಿಗೆ ಗಮನಕ್ಕೆ ತಂದಿದ್ದಾರೆ. ಆದರೆ ಘಟನೆಯನ್ನು ಶಿಕ್ಷಕರು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಶಿಕ್ಷಕರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರಗೆ ಮನವಿ ಮಾಡಲಾಗಿದೆ. ಕಣ್ಣು ಕಳೆದುಕೊಂಡ ವಿದ್ಯಾರ್ಥಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಮನವಿ ಮಾಡಲಾಗಿದೆ. ಮುಖ್ಯ ಶಿಕ್ಷಕಿ ಜಯಶ್ರೀ ಮತ್ತು ಅತಿಥಿ ಶಿಕ್ಷಕಿ ಶಿಲ್ಪಾ ಎಂಬುವವರ ವಿರುದ್ಧ ಮಹಾಲಿಂಗಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಜಮಖಂಡಿ ಎಸಿ ಶ್ವೇತಾ ಬಿಡಿಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರ ಮನವಿ ಮೇರೆಗೆ ಕರ್ತವ್ಯ ನಿರ್ಲಕ್ಷ್ಯ ತೋರಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *