ಸುದ್ದಿ ಸಂಗ್ರಹ ಶಹಾಬಾದ್
ಮೇ.27 ರಿಂದ 3 ದಿನಗಳ ಕಾಲ ಅಲ್ದಿಹಾಳ ಗ್ರಾಮದ ಶಕ್ತಿ ದೇವತೆ ಮರಿಯಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪೀಠಾಧಿಪತಿ ರಾಜು ಪೂಜಾರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ.27 ರಂದು ಬೆಳಗ್ಗೆ 6 ಗಂಟೆಗೆ ಮರಿಯಮ್ಮ ದೇವಿಯ ಮೂರ್ತಿಗೆ ಮಹಾರುದ್ರಾಭಿಷೇಕ ಹಾಗೂ ವಿವಿಧ ಪೂಜೆಗಳು ನೆರವೇರಲಿವೆ. ನಂತರ ಮಧ್ಯಾಹ್ನ 11 ರಿಂದ ಮಹಾಪ್ರಸಾದ ವಿತರಣೆ.
ಸಂಜೆ 6 ಗಂಟೆಗೆ ನಡೆಯುವ ಧರ್ಮಸಭೆಯು ಕಟ್ಟಿಮನಿ ಹಿರೇಮಠ ಸಂಸ್ಥಾನ ಮಠದ ಪೂಜ್ಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರರ ಸಾನಿಧ್ಯದಲ್ಲಿ ನಡೆಯುವದು, ಶ್ರೀನಿವಾಸ ಸರಡಗಿಯ ಪೂಜ್ಯ ಅಪ್ಪಾರಾವ ದೇವಿ ಮುತ್ಯಾ ಅವರು ನೇತೃತ್ವ ವಹಿಸುವರು, ಕಟ್ಟಿಸಂಗಾವಿಯ ವೇದಮೂರ್ತಿ ಬಸವಯ್ಯ ಸ್ವಾಮಿ ತಾತಾ, ಮಹಾನಗರದ ಯಲ್ಲಾಲಿಂಗ ಪುಣ್ಯಾಶ್ರಮದ ಪೀಠಾಧಿಪತಿ ಜೇಮಸಿಂಗ ಮಹಾರಾಜರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ದೇವಸ್ಥಾನದ ಪೀಠಾಧಿಪತಿ ಪೂಜ್ಯ ರಾಜು ಪೂಜಾರಿ ಹಾಗೂ ರಾಜಕೀಯ ಮುಖಂಡರು, ಸಮಾಜ ಸೇವಕರು ಧರ್ಮಸಭೆಯಲ್ಲಿ ಪಾಲ್ಗೊಳ್ಳವರು.

ಧರ್ಮಸಭೆಯ ನಂತರ ವಾಸು ಚವ್ಹಾಣ್ ಅವರ ವಿಜಯ ಮೆಲೋಡಿಸ್ ಸಂಗೀತ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯುವದು.
ಬುಧವಾರ ದಿ.28 ರಂದು ಮಾಣಿಕ ಗುತ್ತೇದಾರ ಅವರ ಮನೆಯಿಂದ ಘಟವನ್ನು ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ವಿವಿಧ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ದೇವಸ್ಥಾನ ತಲುಪುವುದು, ಮಧ್ಯಾಹ್ನ ರಫಿಕ್ ಮಾಲಿಪಟೇಲ್ ಅವರ ಮನೆಯಿಂದ ದೇವಿಗೆ ಛಾಜಾ ತಲುಪುವುದು ನಂತರ ಕಾಶಪ್ಪ ದೊಡ್ಡಮನಿ ಅವರ ಮನೆಯಿಂದ ಕುಂಭ, ಕಳಸ ದೇವಸ್ಥಾನಕ್ಕೆ ತರಲಾಗುತ್ತದೆ. ರಾತ್ರಿ 9 ಗಂಟೆಗೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳುವದು.
ದಿ.29 ರಂದು ಗುರುವಾರ ಬೆಳಗ್ಗೆ 8 ಗಂಟೆಗೆ ಜಂಗಿ ಪೈಲ್ವಾನರಿಂದ ಕುಸ್ತಿ ಪಂದ್ಯ ನಡೆಯಲಿದೆ. ಶಕ್ತಿ ದೇವತೆ ಮರಿಯಮ್ಮ ದೇವಿ ಜಾತ್ರೆಗೆ ವಿವಿಧ ರಾಜ್ಯದಿಂದ ಭಕ್ತರು ಆಗಮಿಸಿ ದೇವಿಗೆ ಭಕ್ತಿಯ ನಮನ ಸಮರ್ಪಿಸುವರು ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.
ಅಲ್ದಿಹಾಳ ಮರಿಯಮ್ಮ ದೇವಿ ದೇವಸ್ಥಾನದಲ್ಲಿ ಸರ್ವ ಸಮಾಜದವರು ಸೇವೆ ಸಲ್ಲಿಸಿ ಆರಾಧನೆ ಮಾಡುವ ವಾಡಿಕೆ ಇದೆ, ಭಕ್ತರ ಜೀವನದಲ್ಲಿ ಸದಾ ಒಳಿತು ಮಾಡುವ ದೇವಿಯ ಭಕ್ತರು ದೇಶದ ವಿವಿಧ ಕಡೆ ವಾಸವಿದ್ದಾರೆ, ಜಾತ್ರೆಗೆ ಆಗಮಿಸಿ ದೇವಿಯ ಸೇವೆ ಮಾಡಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.
ರಾಜು ಪೂಜಾರಿ
ಪೀಠಾಧಿಪತಿ
ಮರಿಯಮ್ಮ ದೇವಿ ದೇವಸ್ಥಾನ ಅಲ್ದಿಹಾಳ
ಸುದ್ದಿಗೋಷ್ಠಿಯಲ್ಲಿ ಮುಂಬೈಯ ರಾಜು ಪವಾರ, ರಫೀಕ ಪಟೇಲ್ ಮಾಲಿಗೌಡ ಹಾಗೂ ದೇವಸ್ಥಾನ ಸಮಿತಿಯ ಸದಸ್ಯರು ಮಾಹಿತಿ ನೀಡಿದರು.