ನಾಲವಾರ: ಆ.28 ರಂದು ಶ್ರಾವಣ ಮಾಸದ ಮುಕ್ತಾಯ ಸಮಾರಂಭ

ಗ್ರಾಮೀಣ

ಚಿತ್ತಾಪುರ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಕ್ಷೇತ್ರ ನಾಲವಾರದ ಸದ್ಗುರು ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠದಲ್ಲಿ ಆಗಸ್ಟ್ 28 ರಂದು ಗುರುವಾರ ಶ್ರಾವಣ ಮಾಸದ ಮುಕ್ತಾಯ ಸಮಾರಂಭ ಅತ್ಯಂತ ಅದ್ಧೂರಿಯಾಗಿ ನೆರವೇರಲಿದೆ ಎಂದು ಶ್ರೀಮಠದ ವಕ್ತಾರ ಮಹಾದೇವ ಕೆ ಗಂವ್ಹಾರ ತಿಳಿಸಿದ್ದಾರೆ.

ಶ್ರಾವಣ ಮಾಸದ ಪರ್ಯಂತ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದ ನಿಮಿತ್ಯ ಗುರುವಾರ ಮಧ್ಯಾಹ್ನ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಪುರಪ್ರವೇಶ, ಅದ್ಧೂರಿ ಶೋಭಾಯಾತ್ರೆ ಮತ್ತು ಸದ್ಗುರು ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಶ್ರಾವಣ ಮಾಸದ ನಂತರ ಬರುವ ಮೊದಲನೇ ಗುರುವಾರದಂದು ನಾಲವಾರ ಶ್ರೀಮಠದಲ್ಲಿ ಶ್ರಾವಣ ಮಾಸದ ಮುಕ್ತಾಯ ಸಮಾರಂಭ ನಡೆಸುವ ಸಂಪ್ರದಾಯವಿದ್ದು, ನಾಲವಾರ ಗ್ರಾಮ ಮಾತ್ರವಲ್ಲದೆ ಸುತ್ತಮುತ್ತಲಿನ ಸರ್ವ ಗ್ರಾಮಗಳ ಮತ್ತು ವಿವಿಧ ಭಾಗಗಳ ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.

ಶ್ರಾವಣ ಮಾಸದ ಪ್ರಯುಕ್ತ ಶ್ರೀಮಠದಲ್ಲಿ ಪ್ರತಿದಿನ ಕರ್ತೃ ಕೋರಿಸಿದ್ಧೇಶ್ವರರ ಗದ್ದುಗೆಗೆ ವಿಶೇಷ ಅಲಂಕಾರ, ಪೂಜೆ, ನಂತರ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಇಷ್ಟಲಿಂಗ ಮಹಾಪೂಜೆ, ಭಕ್ತರಿಗೆ ರುದ್ರಾಕ್ಷಿ ಧಾರಣೆ, ಇಷ್ಟಲಿಂಗ ಧಾರಣೆ, ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ.

ಪ್ರತಿವರ್ಷದ ಪದ್ಧತಿಯಂತೆ ಈ ವರ್ಷವೂ ಸಹ ನಾಡಿನ ವಿವಿಧ ಭಾಗಗಳ ಸಹಸ್ರಾರು ಭಕ್ತರು ತಂಡೋಪತಂಡವಾಗಿ ಪಾದಯಾತ್ರೆ ಮೂಲಕ ಶ್ರೀಮಠಕ್ಕೆ ಆಗಮಿಸಿ ದರ್ಶನ ಪಡೆದರು.

ದಾಸೋಹಕ್ಕಾಗಿ ತಾವು ಬೆಳೆದ ಧಾನ್ಯಗಳನ್ನು ತಲೆಯ ಮೇಲೆ ಹೊತ್ತುಕೊಂಡು ಬಂದು ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು.

ಗುರುವಾರ ನಡೆಯುವ ಪೂಜ್ಯರ ಪುರಪ್ರವೇಶ ಹಾಗೂ ಶೋಭಾಯಾತ್ರೆಯಲ್ಲಿ ಪುರವಂತಿಗೆ, ಗೊಂಬೆ ಕುಣಿತ, ಡೊಳ್ಳು, ಹಲಗೆ, ತಮಟೆ, ಲೇಜಿಮ್ ಕುಣಿತ, ಕೋಲಾಟ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿದ್ದು, ಮೆರವಣಿಗೆ ನಂತರ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ ನಡೆಯುವುದು.

ನಾಲವಾರ ಶ್ರೀಮಠದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುವಿನ ಕೃಪೆಗೆ ಪಾತ್ರರಾಗಲು ಮಹಾದೇವ ಗಂವ್ಹಾರ ಕೋರಿದ್ದಾರೆ.

Leave a Reply

Your email address will not be published. Required fields are marked *