ಬೆಂಗಳೂರು: ನನ್ನ ವಜಾದ ಹಿಂದೆ ಪಿತೂರಿ ಮತ್ತು ಷಡ್ಯಂತ್ರವಿದೆ. ಏನ್ ಆಗಿದೆ ? ಯಾರು ಹಿಂದೆ ಇದ್ದಾರೆ ಎಲ್ಲಾ ಗೊತ್ತಿದೆ. ಕಾಲ ಬಂದಾಗ ಅದನ್ನು ತಿಳಿಸುತ್ತೆನೆ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಬಾಂಬ್ ಸಿಡಿಸಿದ್ದಾರೆ.
ಮಂತ್ರಿ ಸ್ಥಾನದಿಂದ ವಜಾಗೊಳಿಸಿದ ಬೆನ್ನಲ್ಲೇ ರಾಜಣ್ಣ ಅವರು ತಮ್ಮ ಆಪ್ತ ಸಚಿವರು, ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಅವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಮಾಜಿಯಾಗಿ ನಿಮ್ಮ ಮುಂದೆ ಮಾತನಾಡುತ್ತಿದ್ದೆನೆ. ಮಾಜಿ ಸಚಿವ ಎಂದು ಕರೆಸಿಕೊಳ್ಳಲು ಸಂತೋಷವಾಗುತ್ತಿದೆ. ಮಂತ್ರಿಯಾಗಲು ಸಿದ್ದರಾಮಯ್ಯನವರು ಅವಕಾಶ ಕೊಟ್ಟಿದ್ದರು. ಇಲ್ಲಿಯವರೆಗೆ ಅವಕಾಶ ನೀಡಿದ್ದಕ್ಕೆ ನಾನು ಧನ್ಯವಾದ ತಿಳಿಸಲು ತೆರಳಿದ್ದೆ. ವಜಾಗೊಳಿಸಿದ ನಿರ್ಧಾರ ಪ್ರಕಟವಾದ ನಂತರ ಮುಖ್ಯಮಂತ್ರಿಗಳು ಮಾತನಾಡಬಹುದು ಎಂದು ಭಾವಿಸಿದ್ದೆ. ಅವರು ಪ್ರತಿಕ್ರಿಯೆ ನೀಡಿದ ಬಳಿಕ ನಾನು ಮಾತನಾಡಬೇಕು ಎಂದುಕೊಂಡಿದ್ದೆ. ಆದರೆ ಅವರು ಯಾವುದೆ ಪ್ರತಿಕ್ರಿಯೆ ನೀಡದ ಕಾರಣ ಈಗ ನಾನೇ ಮಾತನಾಡುತ್ತಿದ್ದೆನೆ ಎಂದರು.
ರಾಹುಲ್ ಗಾಂಧಿ, ವೇಣುಗೋಪಾಲ್ ಅವರಿಗೆ ನನ್ನ ಬಗ್ಗೆ ತಪ್ಪು ಗ್ರಹಿಕೆಯಾಗಿದೆ. ತಪ್ಪು ಗ್ರಹಿಕೆಯನ್ನು ಸರಿಪಡಿಸುವ ಕಾರ್ಯ ಮಾಡಲಿದ್ದೆನೆ. ಹೀಗಾಗಿ ಮನವರಿಕೆ ಮಾಡಿಸಲು ದೆಹಲಿಗೆ ಹೋಗಲಿದ್ದೆನೆ ಎಂದು ತಿಳಿಸಿದರು.
ರಾಜ್ಯಪಾಲರ ಕಚೇರಿಯಿಂದ ವಜಾಗೊಳಿಸಿರುವುದಾಗಿ ಬಂದಿದೆ. ಇದು ಪಕ್ಷದ ತೀರ್ಮಾನವಾಗಿದ್ದು ನಾವು ಎಲ್ಲಿ ಏನೇ ಮಾತನಾಡಿದರೂ ನಾವು ಈ ಪಕ್ಷಕ್ಕೆ ಬದ್ದವಾಗಿದ್ದೆವೆ. ರಾಹುಲ್ ಗಾಂಧಿ ನಮ್ಮ ನಾಯಕರು. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೆವೆ. ಸಿಎಂ ಅವರಿಗೆ ಶಕ್ತಿ ತುಂಬುವ ವಿಷಯದಲ್ಲಿ ನಾನು ಮೊದಲಿಗ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ತಿಳಿಸುತ್ತೆನೆ ಎಂದು ಹೇಳಿ ಮಾತುಗಳನ್ನು ಮುಗಿಸಿದರು.