ಚೆನ್ನೈ: 100 ಕ್ಕೂ ಹೆಚ್ಚು ಕಾರುಗಳನ್ನು ಕದ್ದು ರಾಜಸ್ಥಾನ ಮತ್ತು ನೇಪಾಳದಲ್ಲಿ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿರುವ ಕಳ್ಳನೊಬ್ಬ 20 ವರ್ಷಗಳ ನಂತರ ಕಳ್ಳತನ ಪ್ರಕರಣವೊಂದರಲ್ಲಿ ಸಿಕ್ಕಿ ಬಿದ್ದು ಪೊಲೀಸರ ಅತಿಥಿಯಾಗಿದ್ದಾನೆ.
ರಾಜಸ್ಥಾನದ ಸತೇಂದ್ರ ಸಿಂಗ್ ಶೇಖಾವತ್ ಬಂಧಿತ. ಈತ ಕಳೆದ 20 ವರ್ಷಗಳಲ್ಲಿ 100 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಕದ್ದಿದ್ದಾನೆ. ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಪುದುಚೇರಿ ಸೇರಿದಂತೆ ಮುಂತಾದ ರಾಜ್ಯಗಳಲ್ಲಿ ಆಧುನಿಕ ಉಪಕರಣಗಳನ್ನು ಬಳಸಿ ಕಾರುಗಳನ್ನು ಕದ್ದು ರಾಜಸ್ಥಾನ ಮತ್ತು ನೇಪಾಳದಲ್ಲಿ ಮಾರಾಟ ಮಾಡಿದ್ದಾನೆ.
100ಕ್ಕೂ ಹೆಚ್ಚು ಕಾರು ಕದ್ದ ಕಳ್ಳ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ ?
ಚೆನ್ನೈನ ಅಣ್ಣಾ ನಗರದ ಕಥಿರವನ್ ಕಾಲೋನಿಯ ನಿವಾಸಿ ಎಥಿರಾಜ್ ರಥಿನಂ ಕಳೆದ ತಿಂಗಳು ತಮ್ಮ ಮನೆಯ ಬಾಗಿಲಲ್ಲಿ ತಮ್ಮ ದುಬಾರಿ ಐಷಾರಾಮಿ ಕಾರನ್ನು ನಿಲ್ಲಿಸಿದ್ದರು. ಮುಂಜಾನೆ ಬಂದ ನಿಗೂಢ ವ್ಯಕ್ತಿಯೊಬ್ಬ ಆಧುನಿಕ ಉಪಕರಣಗಳನ್ನು ಬಳಸಿ ಕಾರನ್ನು ಸುಲಭವಾಗಿ ಕದ್ದಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಎಥಿರಾಜ್, ಹತ್ತಿರದ ಕಣ್ಗಾವಲು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತಿರುಮಂಗಲಂ ಪೊಲೀಸರಿಗೆ ದೂರು ನೀಡಿದ್ದಾರೆ.ಇದರ ಬೆನ್ನಲ್ಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳನಿಗಾಗಿ ಹುಡುಕಾಟ ನಡೆಸಿದರು. ಹೆಚ್ಚಿನ ತನಿಖೆಯಲ್ಲಿ ಶಂಕಿತ ಪುದುಚೇರಿಯಲ್ಲಿ ಅಡಗಿಕೊಂಡಿರುವುದು ಬೆಳಕಿಗೆ ಬಂದಿತು. ಇದರ ಬೆನ್ನಲ್ಲಿ ಪೊಲೀಸರು ಅಲ್ಲಿಗೆ ತೆರಳಿ ರಾಜಸ್ಥಾನದ ಸತೇಂದ್ರಸಿಂಗ್ ಶೇಖಾವತ್ (43) ಅವರನ್ನು ಬಂಧಿಸಿದರು. ತನಿಖೆಯ ಸಮಯದಲ್ಲಿ, ಅವರು ಎಂಬಿಎ ಪದವೀಧರರು ಮತ್ತು ಅವರ ತಂದೆ ನಿವೃತ್ತ ಸೇನಾ ಅಧಿಕಾರಿ ಎಂದು ತಿಳಿದುಬಂದಿದೆ.
ಕಳೆದ 20 ವರ್ಷಗಳಿಂದ, ಸತೇಂದ್ರ ಸಿಂಗ್ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ಪುದುಚೇರಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಐಷಾರಾಮಿ ಕಾರುಗಳನ್ನು ಕದ್ದು, ಆಧುನಿಕ ಉಪಕರಣಗಳನ್ನು ಬಳಸಿ, ನಂತರ ಅವುಗಳನ್ನು ನೇರವಾಗಿ ರಸ್ತೆಯಲ್ಲಿ ಓಡಿಸಿಕೊಂಡು ಹೋಗಿ ರಾಜಸ್ಥಾನ ಮತ್ತು ನೇಪಾಳದಲ್ಲಿ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಇಲ್ಲಿಯವರೆಗೆ ಆತ 100 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಕದ್ದು ಆ ಹಣದಿಂದ ಐಷಾರಾಮಿ ಜೀವನ ನಡೆಸಿದ್ದಾನೆ. ಈಗ ಚೆನ್ನೈ ಪೊಲೀಸರು ಆತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದಾರೆ.