ಭಾವನ ಜೊತೆ ಅಕ್ರಮ ಸಂಬಂಧ: ಕರೆಂಟ್‌ ಶಾಕ್‌ ಕೊಟ್ಟು ಗಂಡನ ಕೊಂದ ಹೆಂಡತಿ

ನವದೆಹಲಿ

ನವದೆಹಲಿ: ಆಕಸ್ಮಿಕ ಸಾವು ಎಂದು ನಂಬಲಾಗಿದ್ದ ದೆಹಲಿ ನಿವಾಸಿ ಕರಣ್‌ ದೇವ್‌ ಸಾವಿನ ಪ್ರಕರಣ ತಿರುವು ಪಡೆದುಕೊಂಡಿದ್ದು, ಪ್ರಿಯಕರ ಜೊತೆ ಸೇರಿ ಪತ್ನಿಗೆ ವಿದ್ಯುತ್‌ ಶಾಕ್‌ ಕೊಟ್ಟು ಕೊಂದಿದ್ದಾಳೆ ಎಂದು ತನಿಖೆಯಿಂದ ಬಯಲಾಗಿದೆ.

ಜುಲೈ 13ರಂದು ಕರಣ್‌ ದೇವ್‌ ಅವರನ್ನು ಮಾತಾ ರೂಪಾರಾಣಿ ಮ್ಯಾಗೊ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಪತ್ನಿ ಸುಶ್ಮಿತಾ, ವಿದ್ಯುತ್‌ ಆಕಸ್ಮಿಕವಾಗಿ ತಗುಲಿ ಬಿದ್ದಿದ್ದಾರೆ ಎಂದು ಹೇಳಿದ್ದಳು.

ಪರೀಕ್ಷೆ ನಡೆಸಿದ ಆಸ್ಪತ್ರೆ ಸಿಬ್ಬಂದಿ ಕರಣ್‌ ಮೃತಪಟ್ಟಿರುವುದಾಗಿ ತಿಳಿಸಿದ್ದರು.

ಆಕಸ್ಮಿಕ ಸಾವು ಆಗಿದ್ದರಿಂದ ಮರಣೋತ್ತರ ಪರೀಕ್ಷೆ ನಡೆಸಲು ಸುಶ್ಮಿತಾ ಮತ್ತು ಆಕೆಯ ಪ್ರಿಯಕರ ರಾಹುಲ್‌(ಕರಣ್‌ ಸಹೋದರ ಸಂಬಂಧಿ) ನಿರಾಕರಿಸಿದ್ದರು. ಆದರೆ ಮೃತನ ವಯಸ್ಸು ಮತ್ತು ಸಾವಿನ ಸುತ್ತ ಅನುಮಾನಗಳು ಇರುವುದರಿಂದ ಶವ ಪರೀಕ್ಷೆ ನಡೆಸಬೇಕೆಂದು ಪೊಲೀಸರು ತಿಳಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕಳುಹಿಸಿದ್ದರು.

ಘಟನೆ ನಡೆದ ಮೂರು ದಿನಗಳ ನಂತರ ಮೃತನ ಕಿರಿಯ ಸಹೋದರ ಕುನಾಲ್, ಅಣ್ಣನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆತನ ಪತ್ನಿ ಸುಶ್ಮಿತಾ ಮತ್ತು ಸಹೋದರ ರಾಹುಲ್‌ ಸೇರಿ ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರ ಮುಂದೆ ಹೇಳಿದ್ದರು. ಈ ವೇಳೆ ಸುಶ್ಮಿತಾ ಮತ್ತು ರಾಹುಲ್‌ ನಡುವಿನ ವಾಟ್ಸಪ್‌ ಚಾಟ್‌ ಅನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

15 ನಿದ್ರೆ ಮಾತ್ರೆ ಕುಡಿಸಿ ಕರೆಂಟ್‌ ಶಾಕ್‌

ಸುಶ್ಮಿತಾ ಮತ್ತು ರಾಹುಲ್‌ ನಡುವೆ ಅಕ್ರಮ ಸಂಬಂಧವಿದ್ದು, ಕರಣ್‌ನನ್ನು ಕೊಲೆ ಮಾಡಲು ಇದು ಕಾರಣವಾಗಿತ್ತು ಎಂದು ಚಾಟ್‌ಗಳು ಬಹಿರಂಗಪಡಿಸಿವೆ. 15 ನಿದ್ರೆ ಮಾತ್ರೆಗಳನ್ನು ಊಟದಲ್ಲಿ ಬೆರೆಸಿ ಕರಣ್‌ ಪ್ರಜ್ಞೆ ತಪ್ಪುವ ಹಾಗೆ ಮಾಡಿದ್ದಾರೆ. ಈ ವೇಳೆ ನಿದ್ರೆ ಮಾತ್ರೆ ಸೇವಿಸಿದವರು ಸಾಯುವುದಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿದ್ದರು.

ಅಲ್ಲದೇ ಈ ಸಾವನ್ನು ‘ಆಕಸ್ಮಿಕ ಸಾವು’ ಎಂದು ಬಿಂಬಿಸಲು ಇಬ್ಬರು ಸೇರಿ ಕರಣ್‌ಗೆ ವಿದ್ಯುತ್ ಶಾಕ್ ನೀಡಿದ್ದಾರೆ ಎಂದು ತನಿಖೆಯಿಂದ ಗೊತ್ತಾಗಿದೆ.

ತನಿಖೆ ವೇಳೆ ಪತಿಯನ್ನು ಕೊಂದಿರುವುದಾಗಿ ಪತ್ನಿ ಒಪ್ಪಿಕೊಂಡಿದ್ದಾಳೆ.

ದೈಹಿಕವಾಗಿ ಕಿರುಕುಳ ನೀಡುತ್ತಿದ್ದು, ಪದೆ ಪದೆ ಹಣ ತರುವಂತೆ ಪೀಡಿಸುತ್ತಿದ್ದ. ಅದರಿಂದ ಬೇಸತ್ತು ಪತಿಯನ್ನು ಕೊಂದಿದ್ದೆನೆ ಎಂದು ಆಕೆ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಆರೋಪಿಗಳಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *