ಕೇವಲ 2 ಸೆಕೆಂಡ್‌ನಲ್ಲಿ 700 ಕಿ.ಮೀ ವೇಗ: ಹೊಸ ವಿಶ್ವ ದಾಖಲೆ ಬರೆದ ಚೀನಾದ ‘ಮ್ಯಾಗ್ಲೆವ್’ ರೈಲು

ಸುದ್ದಿ ಸಂಗ್ರಹ ವಿಶೇಷ

ಬೀಜಿಂಗ್: ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತನ್ನೆ ಬೆರಗುಗೊಳಿಸುವ ಚೀನಾ, ಇದೀಗ ಸಾರಿಗೆ ಕ್ಷೇತ್ರದಲ್ಲಿ ಅಸಾಧ್ಯವಾದದ್ದು ಸಾಧಿಸಿ ತೋರಿಸಿದೆ. ಚೀನಾದ ಅತ್ಯಾಧುನಿಕ ಮ್ಯಾಗ್ಲೆವ್ (ಮ್ಯಾಗ್ನೆಟಿಕ್ ಲೆವಿಟೇಶನ್) ರೈಲು ಕೇವಲ 2 ಸೆಕೆಂಡ್‌ಗಳಲ್ಲಿ 700 ಕಿಲೋಮೀಟರ್ ತಲುಪುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದೆ.

ಏನಿದು ಪ್ರಯೋಗ ?
ಚೀನಾದ ‘ನ್ಯಾಷನಲ್ ಯೂನಿವರ್ಸಿಟಿ ಆಫ್ ಡಿಫೆನ್ಸ್ ಟೆಕ್ನಾಲಜಿ’ಯ ಸಂಶೋಧಕರು ಈ ಪ್ರಯೋಗ ನಡೆಸಿದ್ದಾರೆ. ಸುಮಾರು 1 ಟನ್ (1,000 ಕೆಜಿ) ತೂಕದ ವಾಹನ ಮ್ಯಾಗ್ಲೆವ್ ಟ್ರ್ಯಾಕ್ ಮೇಲೆ ಪರೀಕ್ಷೆಗೆ ಒಳಪಡಿಸಲಾಗಿದೆ. 400 ಮೀಟರ್ ಉದ್ದದ ಟ್ರ್ಯಾಕ್‌ನಲ್ಲಿ ನಡೆಸಲಾದ ಈ ಪರೀಕ್ಷೆಯಲ್ಲಿ, ರೈಲು ಕಣ್ಣು ಮಿಟುಕಿಸುವುದರೊಳಗೆ 700 ಕಿ.ಮೀ ವೇಗ ತಲುಪಿದೆ. ಅಷ್ಟೆ ಅಲ್ಲದೆ, ಆ ವೇಗ ತಲುಪಿದ ನಂತರ ಸುರಕ್ಷಿತವಾಗಿ ನಿಲುಗಡೆ ಕೂಡ ಆಗಿದೆ.

ಹೇಗಿದೆ ಈ ತಂತ್ರಜ್ಞಾನ ?
ಸಾಮಾನ್ಯ ರೈಲುಗಳಂತೆ ಇವು ಚಕ್ರಗಳ ಮೇಲೆ ಚಲಿಸುವುದಿಲ್ಲ. ಬದಲಾಗಿ, ಇದು ‘ಸೂಪರ್ ಕಂಡಕ್ಟಿಂಗ್ ಮ್ಯಾಗ್ನೆಟ್’ (ಅತ್ಯುತ್ತಮ ವಾಹಕ ಆಯಸ್ಕಾಂತ) ತಂತ್ರಜ್ಞಾನ ಬಳಸುತ್ತದೆ.‌

ಆಯಸ್ಕಾಂತೀಯ ಶಕ್ತಿಯಿಂದ ರೈಲು ಹಳಿಗಳಿಂದ ಸ್ವಲ್ಪ ಮೇಲಕ್ಕೆ ತೇಲುತ್ತದೆ. ಹಳಿ ಮತ್ತು ರೈಲಿನ ನಡುವೆ ಯಾವುದೆ ಸಂಪರ್ಕ ಇಲ್ಲದ ಕಾರಣ ಘರ್ಷಣೆ ಇರುವುದಿಲ್ಲ. ಘರ್ಷಣೆ ರಹಿತವಾಗಿರುವುದರಿಂದ ಇದು ಮಿಂಚಿನ ವೇಗದಲ್ಲಿ ಚಲಿಸಲು ಸಾಧ್ಯವಾಗುತ್ತದೆ.

ವಿಡಿಯೋ ದೃಶ್ಯಾವಳಿಗಳಲ್ಲಿ ಈ ರೈಲು ಮಿಂಚಿನಂತೆ ಕಾಣಿಸಿಕೊಂಡಿದ್ದು, ಬರಿಗಣ್ಣಿಗೆ ಸರಿಯಾಗಿ ಕಾಣದಷ್ಟು ವೇಗವಾಗಿ ಹಾದುಹೋಗಿದೆ.

ಭವಿಷ್ಯದ ಸಾರಿಗೆಗೆ ಬುನಾದಿ
ಈ ವೇಗವರ್ಧಕ ತಂತ್ರಜ್ಞಾನವು ಕೇವಲ ರೈಲುಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಭವಿಷ್ಯದ ‘ಹೈಪರ್‌ಲೂಪ್’ ಯೋಜನೆಗಳಿಗೆ ಪ್ರಮುಖ ಉತ್ತೇಜನ ನೀಡಲಿದೆ. ನಿರ್ವಾತ ಕೊಳವೆಗಳಲ್ಲಿ ರೈಲುಗಳು ಸಂಚರಿಸುವ ಹೈಪರ್‌ಲೂಪ್ ಪರಿಕಲ್ಪನೆಗೆ ಈ ಮ್ಯಾಗ್ಲೆವ್ ತಂತ್ರಜ್ಞಾನವೆ ಆಧಾರವಾಗಿದೆ. ಈ ವೇಗದಲ್ಲಿ ರೈಲುಗಳು ಸಂಚರಿಸಿದರೆ, ದೂರದ ನಗರಗಳ ನಡುವಿನ ಪ್ರಯಾಣದ ಸಮಯ ಗಂಟೆಗಳಿಂದ ನಿಮಿಷಗಳಿಗೆ ಇಳಿಕೆಯಾಗಲಿದೆ.

ರಾಕೆಟ್ ಉಡಾವಣೆಗೂ ಸಹಕಾರಿ
ಈ ತಂತ್ರಜ್ಞಾನವನ್ನು ‘ಎಲೆಕ್ಟ್ರೋಮ್ಯಾಗ್ನೆಟಿಕ್ ವೇಗವರ್ಧನೆ’ ಎಂದು ಕರೆಯಲಾಗುತ್ತದೆ. ಇದನ್ನು ಬಾಹ್ಯಾಕಾಶ ಮತ್ತು ವಿಮಾನಯಾನ ಕ್ಷೇತ್ರಗಳಲ್ಲೂ ಬಳಸಬಹುದಾಗಿದೆ. ರಾಕೆಟ್ ಅಥವಾ ವಿಮಾನ ಉಡಾವಣೆ ಮಾಡಲು ಈ ತಂತ್ರಜ್ಞಾನ ಬಳಸಿದರೆ ಇಂಧನ ಉಳಿತಾಯವಾಗುತ್ತದೆ. ಕಡಿಮೆ ವೆಚ್ಚದಲ್ಲಿ ಮೃದುವಾದ ಮತ್ತು ವೇಗವಾದ ಟೇಕ್-ಆಫ್ ಸಾಧ್ಯವಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ದಶಕದ ಪರಿಶ್ರಮ
ಈ ಯೋಜನೆಯ ಹಿಂದೆ ಸುಮಾರು 10 ವರ್ಷಗಳ ಕಠಿಣ ಪರಿಶ್ರಮವಿದೆ. ಇದೆ ವರ್ಷದ ಜನವರಿಯಲ್ಲಿ ಇದೆ ತಂಡವು 648 ಕಿ.ಮೀ ವೇಗದ ದಾಖಲೆ ಬರೆದಿತ್ತು. ಇದೀಗ ಆ ದಾಖಲೆ ಮುರಿದು 700 ಕಿ.ಮೀ ವೇಗ ತಲುಪಲಾಗಿದೆ ಎಂದು ನ್ಯಾಷನಲ್ ಯೂನಿವರ್ಸಿಟಿ ಆಫ್ ಡಿಫೆನ್ಸ್ ಟೆಕ್ನಾಲಜಿಯ ಪ್ರೊಫೆಸರ್ ಲಿ ಜೀ ತಿಳಿಸಿದ್ದಾರೆ. ಸುಮಾರು ಮೂರು ದಶಕಗಳ ಹಿಂದೆ ಇದೆ ವಿಶ್ವವಿದ್ಯಾಲಯವು ಚೀನಾದ ಮೊದಲ ಮಾನವ ಚಾಲಿತ ಮ್ಯಾಗ್ಲೆವ್ ರೈಲನ್ನು ಅಭಿವೃದ್ಧಿಪಡಿಸಿತ್ತು ಎಂಬುದು ವಿಶೇಷ.

Leave a Reply

Your email address will not be published. Required fields are marked *