ಚಿತ್ತಾಪುರ: ಬಾಲ ಕಾರ್ಮಿಕ ಪದ್ಧತಿಯು ಮಕ್ಕಳ ಬೆಳವಣಿಗೆಗೆ ಮಾರಕವಾಗಿದ್ದು, ಅದರ ನಿರ್ಮೂಲನೆಗೆ ಸರ್ಕಾರಗಳು ಅನೇಕ ಕಾಯ್ದೆ-ಕಾನೂನುಗಳನ್ನು ಜಾರಿಗೊಳಿಸಿದೆ. ಇವುಗಳನ್ನು ಅನುಷ್ಠಾನಗೊಳಿಸಿ ನಿರ್ಮೂಲನೆ ಮಾಡಲು ಸರ್ಕಾರ, ಕಾರ್ಮಿಕ ಇಲಾಖೆ ಶ್ರಮಿಸುತ್ತಿದೆ. ಇವರ ಜೊತೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ನಿವೃತ್ತ ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ.ಸಿದ್ಧಲಿಂಗಪ್ಪ ಹೇಳಿದರು.
ಮತಕ್ಷೇತ್ರದ ವ್ಯಾಪ್ತಿಯ ಮಾಡಬೂಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲೆಯಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ‘ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ಉದ್ಘಾಟಿಸಿ, ನಂತರ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಅವರು, ಬಾಲ ಕಾರ್ಮಿಕತೆಯಿಂದಾಗುವ ದುಷ್ಪರಿಣಾಮಗಳನ್ನು ಬಾಲ ಕಾರ್ಮಿಕರು, ಪಾಲಕ-ಪೋಷಕ, ಸಮುದಾಯಕ್ಕೆ ಮನವರಿಕೆ ಮಾಡಿಕೊಟ್ಟು, ಅವರಲ್ಲಿ ಮಾನಸಿಕ ಧೈರ್ಯ ತುಂಬಬೇಕು. ಅಂತಹ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಯೋಜನೆ, ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಬಹುದಾಗಿದೆ ಎಂದರು.
ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಎಚ್. ಮಾತನಾಡಿ, ಶಿಕ್ಷಣ ದೊರೆತರೆ ಹಾಗೂ ಬಡತನ ನಿರ್ಮೂಲನೆಯಾದರೆ ಬಾಲ ಕಾರ್ಮಿಕತೆ ನಿರ್ಮೂಲನೆಯಾಗುತ್ತದೆ ಎಂಬ ಸಂಗತಿಯಿಂದ ಸರ್ಕಾರಗಳು ಅನೇಕ ಸೌಕರ್ಯಗಳನ್ನು ನೀಡುತ್ತಿವೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಪಾಲಕ-ಪೋಷಕ ವರ್ಗದವರು ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡದೆ, ಶಿಕ್ಷಣ ನೀಡಿ ಸದೃಢ ಮಾನವ ಸಂಪನ್ಮೂಲವನ್ನಾಗಿಸಬೇಕು. ಉದ್ಯೋಗದಾತರು ಎಂದಿಗೂ ಕೂಡಾ ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳಬಾರದು ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಾಲೆಯ ಶಿಕ್ಷಕರಾದ ವೀರೇಂದ್ರ ಎಸ್.ಮಠ, ಲಕ್ಷ್ಮಿಪುತ್ರ ಪೂಜಾರಿ, ಭೀಮಾಶಂಕರ ಮಡಿವಾಳ, ಜ್ಯೋತಿ ನಾಗಮಾರಪಳ್ಳಿ, ಪ್ರತಿಭಾ ಅಂಕದ್, ಅತ್ತರ್ ಬಿಲ್ಕಿಸ್ ಖಾನಂ, ಡಾ.ಭವಾನಿ ಗೋಳೆದ್, ದೀಪಾಬಾಯಿ ಪಾಟೀಲ್, ಶಾಂತೇಶ್ವರಿ ಮಠ ಮತ್ತು ವಿದ್ಯಾರ್ಥಿಗಳು ಇದ್ದರು.