ಪರಿಸರ ಸಮತೋಲನೆಗೆ ಸಾಗರ-ಸಮುದ್ರಗಳು ಅಗತ್ಯ: ಎಚ್.ಬಿ ಪಾಟೀಲ

ಜಿಲ್ಲೆ

ಕಲಬುರಗಿ: ಪರಿಸರ ಸಮತೋಲನ ಸ್ಥಿತಿಯಲ್ಲಿರಲು ಸಾಗರ ಮತ್ತು ಸಮುದ್ರಗಳು ತುಂಬಾ ಅವಶ್ಯಕವಾಗಿವೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಜರುಗಿದ ‘ವಿಶ್ವ ಸಾಗರಗಳು ಮತ್ತು ಸಮುದ್ರ ಸಂಬಂಧಿ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಮಾನವನಿಗೆ ಅವಶ್ಯಕವಾಗಿ ಬೇಕಾಗುವ ನೀರನ್ನು ಪೂರೈಸುವ ಸಾಗರಗಳು ಅಮೂಲ್ಯವಾದ ನೈಸರ್ಗಿಕ ಸಂಪತ್ತಾಗಿವೆ. ಭೂಮಿಯ ಮೇಲೆ ಒಟ್ಟು ಶೇ.97ರಷ್ಟು ನೀರನ್ನು ಹಿಡಿದಿಟ್ಟುಕೊಂಡು ಮಳೆಯ ರೂಪದಲ್ಲಿ ಭೂಮಿಯ ಮೇಲೆ ಸುರಿಯುವ ಮೂಲಕ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಉಳಿಸುತ್ತವೆ ಎಂದರು.

ಸಸ್ಯ ಸಂಪತ್ತುಗಳಿಂದ ಆಕ್ಸಿಜನ್ ದೊರೆತು ಜೀವಿಗಳು ಉಸಿರಾಡಿಸಲು ಸಾಧ್ಯವಾಗುತ್ತದೆ. ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಕಡಿಮೆ ಮಾಡಿ ಪರಿಸರ ಸ್ವಚ್ಚವಾಗಿಡಲು ಸಹಕಾರಿಯಾಗಿವೆ. ವಿಶ್ವದ ಅರ್ಧದಷ್ಟು ಜನರು ಕರಾವಳಿಯ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಜೀವನಾಧಾರವೆಂದರೆ ಸಾಗರಗಳಾಗಿವೆ. ಇಲ್ಲಿನ ಪ್ರಮುಖ ಉದ್ಯೋಗ ಮೀನುಗಾರಿಕೆಯಾಗಿದೆ. ಜೊತೆಗೆ ಉಪ್ಪು, ಚಿಪ್ಪು, ವಜ್ರ, ವೈಡುರ್ಯ ಮತ್ತು ಪೆಟ್ರೋಲಿಯಂಗಳಂತಹ ಅಮೂಲ್ಯವಾದ ಸಂಪತ್ತನ್ನು ಒದಗಿಸಿಕೊಡುವ ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳಿಸುತ್ತವೆ ಎಂದರು.

ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಗರ ಮತ್ತು ಸಮುದ್ರಗಳನ್ನು ಮಲಿನಗೊಳಿಸದೆ ಸುರಕ್ಷಿತವಾಗಿ ಕಾಪಾಡುವುದು ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಆದಿತ್ಯ ಸಿ.ಗಾರಂಪಳ್ಳಿ, ನಂದಕುಮಾರ ಜಕ್ಕನಳ್ಳಿ, ಉಮಾಕಾಂತ ಪಾಟೀಲ, ಮಲ್ಲಯ್ಯ ಮಠ, ಶ್ರೀಶೈಲ್ ಮದ್ದರಗಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *