ನವದೆಹಲಿ: ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಕುಸಿಯುತ್ತಿದೆ ಎಂಬ ವರದಿಗಳ ನಡುವೆ ಆತಂಕಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಕರ್ನಾಟಕದ 7 ಜಿಲ್ಲೆಗಳಲ್ಲಿ, ಹುಟ್ಟುವವರಿಗಿಂತ ಮರಣ ಹೊಂದುವವರ ಪ್ರಮಾಣ ಹೆಚ್ಚಾಗಿದೆ ಎಂಬ ಎಚ್ಚರಿಕೆ ಗಂಟೆ ಕೇಂದ್ರ ಸರ್ಕಾರ ವರದಿ ಮಾಡಿದೆ.
ಸಾಮಾನ್ಯವಾಗಿ ಮರಣ ಪ್ರಮಾಣಕ್ಕಿಂತ ಜನನ ಪ್ರಮಾಣ ಹೆಚ್ಚಿರುತ್ತದೆ. ಆದರೆ ಮರಣ ಪ್ರಮಾಣವೇ ಅಧಿಕವಾಗಿದೆ ಜನನ ಪ್ರಮಾಣ ಕುಸಿಯುತ್ತಿದೆ ಎಂದರೆ, ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ ಎಂದರ್ಥ.
ಈ ರೀತಿಯ ಟ್ರೆಂಡ್ ದೇಶದ 49 ಜಿಲ್ಲೆಗಳಲ್ಲಿ ಕಂಡುಬಂದಿದೆ. ಗಮನಾರ್ಹ ಎಂದರೆ, ಆ ಪೈಕಿ 34 ಜಿಲ್ಲೆಗಳು ದಕ್ಷಿಣ ಭಾರತಕ್ಕೆ ಸೇರಿದವಾಗಿವೆ. ತಮಿಳುನಾಡಿನಲ್ಲೇ ಇಂತಹ 17 ಜಿಲ್ಲೆಗಳು ಇವೆ. ಕರ್ನಾಟಕದ 7, ಕೇರಳದ 6, ಪುದುಚೇರಿಯ 2, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ತಲಾ 1 ಜಿಲ್ಲೆಗಳಲ್ಲಿ ಮರಣದ ಪ್ರಮಾಣ ಹೆಚ್ಚಿದೆ. ತಮಿಳುನಾಡಿನ ಯಾವುದೆ ಜಿಲ್ಲೆಯಲ್ಲೂ ಜನನ ದರ ಹೆಚ್ಚುತ್ತಿಲ್ಲ.
ಆಘಾತಕಾರಿ ಎಂದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ ರೀತಿ ಜನಸಂಖ್ಯೆ ಕ್ಷೀಣಿಸುತ್ತಿದ್ದರೆ, ಉತ್ತರ ಭಾರತದಲ್ಲಿ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿ ಇದೆ. ಮರಣ ಪ್ರಮಾಣಕ್ಕಿಂತ ಜನನ ಪ್ರಮಾಣ ಹೆಚ್ಚಿದೆ. ಅದರಲ್ಲಿಯೂ ಬಿಹಾರ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಜನನ ದರ ಅತಿ ಹೆಚ್ಚು ದಾಖಲಾಗಿದೆ, 3 ಜಿಲ್ಲೆಗಳಲ್ಲಿ ಜನಸಂಖ್ಯೆ ಏರಿಕೆ ಕಂಡಿದೆ. ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ಜಾರ್ಖಂಡ್‌ನಲ್ಲಿ ಮರಣದರ ಕಡಿಮೆ ದಾಖಲಾಗಿದೆ. ಪರಿಣಾಮವಾಗಿ ಅಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ.
ಕೇಂದ್ರ ಸರ್ಕಾರದ 2021ರ ನಾಗರಿಕ ನೋಂದಣಿ ದತ್ತಾಂಶದಲ್ಲಿ ಈ ಅಂಶವಿದೆ. ಈ ವರದಿಯಲ್ಲಿ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಮರಣದರ ಹೆಚ್ಚಿದೆ, ಅತಿ ಹೆಚ್ಚು ಜನಸಂಖ್ಯೆ ಕುಸಿತ ಭೀತಿ ಅನುಭವಿಸುತ್ತಿವೆ. ಜೊತೆಗೆ ಜನಸಂಖ್ಯೆಯು ವೃದ್ಧಾಪ್ಯದ ಕಡೆಗೆ ಮುಖ ಮಾಡುತ್ತಿದ್ದು, ಇದರ ಜೊತೆಗೆ ಎಳೆವಯಸ್ಸಿನವರ ಮರಣವೂ ದಕ್ಷಿಣಕ್ಕೆ ಆತಂಕ ತಂದೊಡ್ಡುತ್ತಿದೆ. ಉತ್ತರದಲ್ಲಿ ಮರಣದ ಪ್ರಮಾಣ ಕಡಿಮೆ ಇದೆ, ಜನಸಂಖ್ಯೆ ಹೆಚ್ಚು ಏರಿಕೆಯಾಗುತ್ತಿದೆ ಎಂಬ ಅಂಶವಿದೆ.
ಇತ್ತೀಚೆಗೆ ಚಂದ್ರಬಾಬು ನಾಯ್ಡು, ಎಂ.ಕೆ ಸ್ಟಾಲಿನ್ ಸೇರಿ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು, ‘ದಕ್ಷಿಣ ರಾಜ್ಯಗಳ ಜನಸಂಖ್ಯೆ ಕುಸಿಯುತ್ತಿದ್ದು, ಉತ್ತರ ಭಾರತದ ಜನಸಂಖ್ಯೆ ಏರುತ್ತಿದೆ. ಇದು ಪ್ರಾದೇಶಿಕ ಜನಸಂಖ್ಯಾ ಅಸಮತೋಲನಕ್ಕೆ ನಾಂದಿ ಹಾಡುತ್ತಿದೆ’ ಎಂದಿದ್ದರು. ಇದಕ್ಕೆ ಈ ಅಂಕಿ-ಅಂಶಗಳು ಪುಷ್ಟಿ ನೀಡುತ್ತಿವೆ.
ಕರ್ನಾಟಕದ ಈ 7 ಜಿಲ್ಲೆಗಳಲ್ಲಿ ಅಪಾಯ
2021ರ ನಾಗರಿಕ ನೋಂದಣಿ ದತ್ತಾಂಶದ ಅನ್ವಯ ಕರ್ನಾಟಕದ 7 ಜಿಲ್ಲೆಗಳಲ್ಲಿ ಮರಣದ ಪ್ರಮಾಣ ಹೆಚ್ಚಾಗಿ ಕಾಣುತ್ತಿದೆ. ಉಡುಪಿ, ಹಾಸನ, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಜನನಕ್ಕಿಂತ ಮರಣದ ಸಂಖ್ಯೆ ಅಧಿಕವಾಗಿದೆ. 2019ರಲ್ಲಿ ಕೇವಲ ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಮಾತ್ರ ಮರಣದರ ಹೆಚ್ಚಿತ್ತು.
ಕಲ್ಯಾಣ ಕರ್ನಾಟಕ ಮಾಮೂಲು ಸ್ಥಿತಿ
ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳದಲ್ಲಿ ಜನನವೇ ಹೆಚ್ಚಿದೆ ಎಂದು ದತ್ತಾಂಶ ಹೇಳಿದೆ. ಮಿಕ್ಕಂತೆ ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಬಳ್ಳಾರಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳು ಆತಂಕದ ಹೊಸ್ತಿಲಲ್ಲಿವೆ.
ರಾಜ್ಯದ 11 ಜಿಲ್ಲೆಗಳಲ್ಲಿ ಏರಿಕೆ ತುಂಬಾ ಕಡಿಮೆ
ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ತುಮಕೂರು, ಮೈಸೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಜನಸಂಖ್ಯೆ ಏರಿಕೆ ತುಂಬಾ ಕಡಿಮೆ ಇದೆ.