ವಿಜಯಪುರು: ಬಸವನಬಾಗೆವಾಡಿ ಪಟ್ಟಣದಲ್ಲಿ ನಡೆದಿದ್ದ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಪೊಲೀಸ್ ಇಲಾಖೆಗೆ ಸವಾಲಾಗಿದೆ. ಸಿನಿಮೀಯ ರೀತಿಯಲ್ಲಿ, ಮಾಸ್ಟರ್ ಪ್ಲ್ಯಾನ್ ಮಾಡಿ ಕಳ್ಳರು ಕೋಟಿ ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾರೆ.
ಕದಿಮರ ಪತ್ತೆಗೆ ಪೊಲೀಸ್ ಇಲಾಖೆ ಎಂಟು ವಿಶೇಷ ತಂಡಗಳು ರಚಿಸಿದೆ. ಬ್ಯಾಂಕ್ನಲ್ಲಿದ್ದ 58 ಕೆಜಿ 975 ಗ್ರಾಂ ಚಿನ್ನಾಭರಣ ಮತ್ತು 5.20 ಲಕ್ಷ ನಗದು ಕಳ್ಳತನವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು.
ಕಳೆದ ತಿಂಗಳು ಮೇ.25 ರಂದು ವಿಜಯಪುರ ಜಿಲ್ಲೆ ಬಸನವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ರಾಷ್ಟ್ರೀಕೃತ ಕೆನರಾ ಬ್ಯಾಂಕ್ನಲ್ಲಿ ಕಳ್ಳತನವಾಗಿತ್ತು. ಬ್ಯಾಂಕ್ನಲ್ಲಿ ಕಳ್ಳತನವಾದ ಸುದ್ದಿ ತಿಳಿದು ಮನಗೂಳಿ ಪೊಲೀಸರು, ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ ಹಾಗೂ ಇತರೆ ಸಿಬ್ಬಂದಿ, ಶ್ವಾನದಳ ಮತ್ತು ಬೆರಳಚ್ಚು ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ನಂತರ ಬ್ಯಾಂಕ್ ಹಿರಿಯ ಆಧಿಕಾರಿಗಳು ಸ್ಥಳಕ್ಕೆ ತೆರಳಿ ಕಳ್ಳತನವಾದ ನಗದು ಚಿನ್ನಾಭರಣಗಳ ಅಂಕಿ ಅಂಶಗಳ ಲೆಕ್ಕ ಹಾಕಿದರು. ಬ್ಯಾಂಕ್ನಲ್ಲಿ ಅಡವಿಟ್ಟ ಹಾಗೂ ಸುರಕ್ಷಣೆಗೆ ಇಟ್ಟಿದ್ದ 58 ಕೆಜಿ 975.94 ಗ್ರಾಂ ಚಿನ್ನಾಭರಣಗಳು ಹಾಗೂ 5.20 ಲಕ್ಷ ನಗದು ಕಳ್ಳತನವಾಗಿರುವುದು ಗೊತ್ತಾಗಿದೆ. ಚಿನ್ನದ ಅಂದಾಜು ಮೌಲ್ಯ 53 ಕೋಟಿ 26ಲಕ್ಷ ರೂ ಎಂದು ಅಂದಾಜು ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಳ್ಳರ ಪತ್ತೆಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.
ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ನೀಡಿರುವ ಮಾಹಿತಿ ಪ್ರಕಾರ, “6 ರಿಂದ 8 ಜನ ಕದೀಮರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಲಾಕರ್ ಓಪನ್ ತೆರೆಯಲು ಮತ್ತು ಸೈರನ್ ಬಂದ್ ಮಾಡಲು ನಕಲಿ ಕೀ ಬಳಕೆ ಮಾಡಿದ್ದಾರೆ. ಬ್ಯಾಂಕ್ ಆವರಣದಲ್ಲಿದ್ದ ಸಿಸಿ ಕೆಮೆರಾಗಳನ್ನು ತಿರುಗಿಸಿದ್ದು ಹಾಗೂ ಸಿಸಿ ಕೆಮೆರಾ (ಎನ್ವಿಆರ್) ಹಾರ್ಡ್ ಡಿಸ್ಕ್ ಸಮೇತ ಪರಾರಿಯಾಗಿದ್ದಾರೆ . ಸತತ ಎರಡು ದಿನಗಳ ಕಾಲ ಸಂಚು ರೂಪಿಸಿ, ಪ್ಲ್ಯಾನ್ ಮಾಡಿ ಕೃತ್ಯ ಎಸಗಲಾಗಿದೆ. ಕದೀಮರ ಪತ್ತೆಗೆ 8 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದ್ದು ತನಿಖೆ ಮುಂದುವರೆದಿದೆ” ಎಂದು ತಿಳಿಸಿದ್ದಾರೆ.
ಕಳ್ಳತನ ಮಾಡಿದ ಆರೋಪಿಗಳು ತನಿಖೆಯ ದಿಕ್ಕು ತಪ್ಪಿಸಲು, ಬ್ಯಾಂಕ್ ಪ್ರವೇಶ ದ್ವಾರದ ಕೀ ಮುರಿದು ಒಳಗೆ ಹೋಗಿ ಕಳ್ಳತನ ಮಾಡಿದ್ದಾರೆ. ನಂತರ ಬ್ಯಾಂಕ್ ಕಿಟಕಿಯ ಸರಳುಗಳನ್ನು ಒಳಗಿನಿಂದಲೇ ಕಟ್ ಮಾಡಿ ಕಿಟಕಿ ಸರಳು ಕಟ್ ಮಾಡಿ ಒಳಗೆ ನುಗ್ಗಿದ್ದಾರೆ ಎಂಬಂತೆ ಬಿಂಬಿಸಿದ್ದಾರೆ. ಅಲ್ಲದೆ ಬ್ಯಾಂಕ್ ಒಳಗೆ ವಾಮಾಚಾರವಾಗಿದೆ ಎಂದು ಬಿಂಬಿಸಲು ಕಪ್ಪು ಬಟ್ಟೆಯ ಬೊಂಬೆ ಇಟ್ಟು ಪೂಜೆ ಮಾಡಿದ್ದಾರೆ ಎಂಬುವುದು ಕೂಡ ತನಿಖೆಯ ಗಮನ ಬೇರೆಡೆ ಸೆಳೆಯಲು ಎಂದು ಎಂಬುದು ತಿಳಿದುಬಂದಿದೆ.
ತನಿಖೆ ತೀವ್ರ ಗತಿಯಲ್ಲಿ ಸಾಗಿದ್ದು ಬೇಗನೇ ಕದೀಮರ ಹೆಡೆಮುರಿ ಕಟ್ಟೊದಾಗಿ ಎಸ್ಪಿ ಭರವಸೆ ನೀಡಿದ್ದಾರೆ. ಇತ್ತ ಗ್ರಾಹಕರು ಮಾತ್ರ ತೀವ್ರ ಆತಂಕಗೊಂಡಿದ್ದಾರೆ. ಅಪಾರ ಪ್ರಮಾಣದ ಚಿನ್ನ ಅಡವಿಟ್ಟವರು ಹಾಗೂ ಸಂರಕ್ಷಣೆಗಾಗಿ ಲಾಕರ್ಗಳಲ್ಲಿ ಚಿನ್ನ ಅಡವಿಟ್ಟವರು ಭಯಗೊಂಡಿದ್ದಾರೆ.
ಸದ್ಯ ಮನಗೂಳಿಯ ಕೆನರಾ ಬ್ಯಾಂಕ್ನಲ್ಲಿ 58 ಕೆಜಿಗೂ ಆಧಿಕ ಚಿನ್ನಾಭರಣ ನಗದು ಕಳ್ಳತನವಾಗಿರುವುದು ಗ್ರಾಹಕರಲ್ಲಿ ಭಯ ಮೂಡಿಸಿದೆ. ಕಳ್ಳತನ ಮಾಡಿದ ಆರೋಪಿಗಳ ಜಾಡನ್ನು ಖಾಕಿ ಪಡೆ ಬೆನ್ನುಹತ್ತಿದೆ. ಶೀಘ್ರವೇ ಇಡಿ ಪ್ರಕರಣಕ್ಕೆ ತಿಲಾಂಜಲಿ ಹಾಡಲಾಗುತ್ತದೆ ಎಂದು ಪೊಲೀಸ್ ಆಧಿಕಾರಿಗಳು ಭರವಸೆ ನೀಡಿದ್ದಾರೆ. ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.