ಬಾಗಲಕೋಟೆ: ಮನುಷ್ಯರಿಗೆ ಆರೋಗ್ಯ ಸಮಸ್ಯೆಯಾದರೆ ಕೂಡಲೆ ಆಸ್ಪತ್ರೆಗೆ ಹೋಗುತ್ತಾರೆ. ವೈದ್ಯರಿಗೆ ಸಮಸ್ಯೆ ಬಗ್ಗೆ ಹೇಳಿ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಅದೆ ರೀತಿ ಇಲ್ಲೊಂದು ಮಂಗ ನೇರವಾಗಿ ಪಶು ಆಸ್ಪತ್ರೆಗೆ ಹೋಗಿದೆ. ತನಗಾದ ಸಮಸ್ಯೆಯ ಬಗ್ಗೆ ವೈದ್ಯರಿಗೆ ತಾನೆ ಸನ್ನೆ ಮೂಲಕ ತೋರಿಸಿದೆ. ಬಳಿಕ ಚಿಕಿತ್ಸೆ ಪಡೆದುಕೊಂಡು ಹೋಗಿದೆ. ಸದ್ಯ ಈ ಘಟನೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಮಂಗಗಳು ಮನುಷ್ಯರಷ್ಟೆ ಬುದ್ದಿ ಜೀವಿಗಳು ಅನ್ನೊದಕ್ಕೆ ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಗಡೂರು ಗ್ರಾಮದ ಪಶು ಆಸ್ಪತ್ರೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಂಗ, ಚಿಕಿತ್ಸೆಗಾಗಿ ನೇರವಾಗಿ ಪಶು ಆಸ್ಪತ್ರೆಗೆ ಬಂದು ವೈದ್ಯನ ಬಳಿ ಸನ್ನೆ ಮೂಲಕ ತನ್ನ ಬಾಧೆಯನ್ನು ಹೇಳಿಕೊಂಡು ಅಚ್ಚರಿಗೆ ಗ್ರಾಸವಾಗಿದೆ.
ತನ್ನ ಗುದದ್ವಾರದ ಬಳಿ ಗಾಯವಾಗಿ, ತೀವ್ರ ನೋವಿನಿಂದ ಬಳಲುತ್ತಿದ್ದ ಕೋತಿಯೊಂದು ತನ್ನ ನೋವಿಗೆ ಪರಿಹಾರ ಕಂಡುಕೊಂಡು ತಾನೆ ಚಿಕಿತ್ಸೆಗಾಗಿ ಪಶು ಆಸ್ಪತ್ರೆಯ ಬಳಿ ಬಂದಿದೆ. ಇದನ್ನು ಗಮನಿಸಿದ ಸಿಬ್ಬಂದಿ ವೈದ್ಯರನ್ನು ಕರೆದಿದ್ದಾರೆ. ಸ್ಥಳದಲ್ಲೆ ಇದ್ದ ಪಶುವೈದ್ಯಕೀಯ ಪರಿವೀಕ್ಷಕ ಜಿ.ಜಿ ಬಿಲ್ಲೊರ ತಪಾಸಣೆ ಮಾಡುವಾಗ ಕೋತಿ ತನಗಾದ ಗಾಯದ ಬಗ್ಗೆ ತಾನೆ ತೋರಿಸಿದೆ. ಬಳಿಕ ಚಿಕಿತ್ಸೆ ನೀಡಲಾಗಿದೆ. ಮೂಕ ಪ್ರಾಣಿಯಾದರೂ ಈ ಮಂಗ ಯಾವ ಮನಷ್ಯನಿಗೂ ಕಮ್ಮಿ ಇಲ್ಲದಂತೆ ಬುದ್ದಿವಂತಿಕೆ ತೋರಿಸಿದೆ.
ಗುಡೂರ ಗ್ರಾಮದಲ್ಲಿ ಮಂಗಗಳ ಹಿಂಡು ಬೀಡುಬಿಟ್ಟಿದೆ. ಈ ಕೋತಿಗಳು ನಿತ್ಯ ಆಸ್ಪತ್ರೆ ಸುತ್ತಮುತ್ತಲಿನ ಗಿಡಮರಗಳಲ್ಲಿ ಓಡಾಡುತ್ತಿದ್ದವು. ಈ ಕೋತಿಯ ಬಾಲ ಕೂಡ ಮೊದಲೇ ಕಟ್ ಆಗಿದೆ. ಮರದಿಂದ ಮರಕ್ಕೆ ನೆಗೆಯುವಾಗ ಗುದದ್ವಾರದ ಬಳಿ ಗಾಯ ಆಗಿರುವ ಸಾಧ್ಯತೆ ಇದೆ. ಆ ಗಾಯದಿಂದ ಮಂಗಣ್ಣ ಬಳಲುತ್ತಿತ್ತು. ಬಹುಶಃ ಆಸ್ಪತ್ರೆ ಹೊರಗೆ ನಿತ್ಯ ಹಸು ಎಮ್ಮೆಗಳಿಗೆ ಚಿಕಿತ್ಸೆ ನಿಡುವುದನ್ನು ಗಮನಿಸಿದೆ ಅನ್ಸುತ್ತೆ. ಹೀಗಾಗಿ ತನಗೂ ನೋವಾಗಿರುವ ಕಾರಣ ಜಾನುವಾರುಗಳಂತೆ ತನ್ನ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳಲು ಬಂದಿರಬಹುದು.
ಆಸ್ಪತ್ರೆ ಬಳಿ ಇದ್ದ ಬೈಕ್ ಮೇಲೆ ಮಲಗಿ ಕೈ ಸನ್ನೆ ಮೂಲಕ ತನ್ನ ನೋವಿನ ವೇದನೆಯನ್ನು ಕೋತಿ ತೋಡಿಕೊಂಡಿದೆ. ಆಗ ವೈದ್ಯ ಕೋತಿ ನೋವು ಅರ್ಥೈಸಿಕೊಂಡು ಚಿಕಿತ್ಸೆ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿ ಅಚ್ಚರಿಗೆ ಕಾರಣವಾಗಿದೆ.
ಮಂಗನಿಂದ ಮಾನವ ಅಂತ ನಾವೆಲ್ಲ ಸಾಕಷ್ಟು ಚರ್ಚೆ ಮಾಡುತ್ತೆವೆ. ಬೈಯುವಾಗಲೂ ‘ಏ ಮಂಗ’ ಅಂತ ಬೈಯುವುದನ್ನು ನೋಡಿದ್ದೆವೆ. ಆದರೆ ಅಂತಹ ಮಂಗ ತೋರಿದ ಜಾಣ್ಮೆಗೆ ಎನ್ನಲರು ಬೆರಗಾಗಿದ್ದಾರೆ. ಇದು ವಿಚಿತ್ರವಾದರೂ ಸತ್ಯ ಎಂದು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಮಂಗನಿಂದ ಮಾನವ ಎನ್ನುವ ಮಾತಿನಂತೆ ಮಾನವನಷ್ಟೇ ನಾನು ಬುದ್ದಿವಂತ ಅನ್ನೊದನ್ನ ಈ ಕೋತಿ ಸಾಬೀತು ಪಡಿಸಿದೆ. ಜಾಣ ಕೋತಿಯ ಘಟನೆ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.