ಕಲಬುರಗಿ: ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಸಾರುವ ಹೊಡಲ ಗ್ರಾಮದ ರಾಮಲಿಂಗೇಶ್ವರ ದೇವಾಲಯ ಮತ್ತು ಸ್ಮಾರಕಗಳ ಕೊಡುಗೆ ಅಪಾರವಾಗಿವೆ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.
ಕಮಲಾಪುರ ತಾಲೂಕಿನ ಹೊಡಲ್ ಗ್ರಾಮದ ರಾಮಲಿಂಗೇಶ್ವರ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-15ರಲ್ಲಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ನಾಡಿನ ಭವ್ಯ ಪರಂಪರೆಯ ಪ್ರತೀಕವಾದ ಸ್ಮಾರಕಗಳ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಇಲ್ಲಿಯ ಒಂದೊಂದು ಕಲ್ಲು, ಶಿಲ್ಪಗಳು, ಬೃಹತ್ ಶಿಲಾ ಶಾಸನ, ಅಷ್ಟ ದಿಕ್ಪಾಲಕರು, ಅಲಂಕಾರಿಕ ಕಂಭಗಳು, 12 ಜ್ಯೋತಿಲಿಂಗಗಳು, ತ್ರೀಮೂರ್ತಿ ಮುಂತಾದ ಸ್ಮಾರಕಗಳು ನಾಡು ಮತ್ತು ರಾಷ್ಟ್ರದ ಇತಿಹಾಸವನ್ನು ಸಾರುತ್ತವೆ. ಕ್ರಿ.ಶ 1118 ಶಾಸನವು ಕಳಚೂರರ ಆಡಳಿತ ತಿಳಿಸುತ್ತದೆ. ಜಿಲ್ಲೆಯಲ್ಲಿಯೆ ಬೃಹತ ಕಲಾತ್ಮಕ ದೇಗುಲ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹೊಡಲ್ ರಾಮಲಿಂಗೇಶ್ವರ ದೇವಾಲಯದ ಇತಿಹಾಸ ಅದ್ಭುತವಾಗಿದೆ, ಇಂದಿನ ಪೀಳಿಗೆಗೆ ತಿಳಿಸಿಕೊಡಬೇಕು. ಈ ಗ್ರಾಮದಲ್ಲಿ ದೊರೆಯುವ ಎರಡು ಶಾಸನಗಳು, ಬೃಹತ್ ನಂದಿ ವಿಗ್ರಹ, ದ್ವಾರ ಪಟ್ಟಿಕೆಗಳು, ಅಲಂಕಾರಿಕ ಸ್ಮಾರಕಗಳು ಕನ್ನಡಿಗರ ಸಾಧನೆಯ ಪ್ರತೀಕವಾಗಿವೆ ಎಂದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ಕಳೆದ ಒಂದು ವರ್ಷದಿಂದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ‘ನಮ್ಮೂರು ನಮಗೆ ಮೇಲು’ ಎನ್ನುವಂತೆ ಭವ್ಯ ಪರಂಪರೆ ಸಾರುವ ಸ್ಮಾರಕಗಳು ಪ್ರವಾಸಿ ತಾಣವನ್ನಾಗುಂತೆ ಮಾಡುವ ಹೊಣೆಗಾರಿಕೆ ಗ್ರಾಮಸ್ಥರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಡಾ.ರಾಜಶೇಖರ ಪಾಟೀಲ, ಗ್ರಾಮಸ್ತರಾದ ಕುಪ್ಪಣ್ಣ ಧನ್ನೂರ, ಪ್ರಕಾಶ ಬಿರಾದಾರ, ಚಂದ್ರಕಾಂತ ಮಾಲಿಪಾಟೀಲ, ಶರಣಬಸಪ್ಪ ಮಾಲಿಪಾಟೀಲ, ಮಲ್ಲಿಕಾರ್ಜುನ ಪಾಟೀಲ, ವಿಠಲರಾವ ಅಂಬಲಗಿ, ಬಸಣ್ಣ ಧನ್ನೂರ, ಮಲ್ಲಿಕಾರ್ಜುನ ಬಿರಾದಾರ, ಅಣವೀರಪ್ಪ ಪಾಟೀಲ, ಲಕ್ಷ್ಮಿಕಾಂತ ಮುಡುಬಿ, ಬಸೀರಸಾಬ್ ಲದಾಫ್, ಶ್ರೀಪತಿ ವರ್ಮಾ, ಸಿದ್ದರಾಮ ಚಿಚಕೋಟಿ, ಮಲ್ಲಿಕಾರ್ಜುನ ಅಂಬಲಗಿ ಸೇರಿದಂತೆ ಅನೇಕರು ಇದ್ದರು.