ಆರೋಗ್ಯಯುತ ಜೀವನಶೈಲಿಯಿಂದ ಅಧಿಕ ರಕ್ತದೊತ್ತಡ ದೂರ: ಡಾ.ರಾಜಶೇಖರ ಪಾಟೀಲ

ಜಿಲ್ಲೆ

ಕಲಬುರಗಿ: ಅನಾರೋಗ್ಯಕರ ಜೀವನಶೈಲಿಯಿಂದ ಬೊಜ್ಜು, ಸ್ಥೂಲಕಾಯದ ಪ್ರಮಾಣ ಹೆಚ್ಚಾಗಿದೆ. ಒತ್ತಡ ಜೀವನ ಸೇರಿದಂತೆ ಮುಂತಾದ ಕಾರಣದಿಂದ ಅಧಿಕ ರಕ್ತದೊತ್ತಡವಿರುವವರ ಸಂಖ್ಯೆ ಹೆಚ್ಚಾಗುತ್ತಾದೆ. ಇದು ಉಸಿರಾಟ ಸಂಬಂಧಿತ ಸಮಸ್ಯೆಗಳೊಂದಿಗೆ ಹೃದಯಘಾತಕ್ಕೆ ಕಾರಣವಾಗುವ ಮೂಲಕ ಜೀವಕ್ಕೆ ಅಪಾಯಕಾರಿಯಾಗಿದೆ. ಆರೋಗ್ಯಯುತ ಜೀವನಶೈಲಿಯಿಂದ ಅಧಿಕ ರಕ್ತದೊತ್ತಡದಿಂದ ದೂರವಿರಲು ಸಾಧ್ಯ ಎಂದು ಹಿರಿಯ ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ಬಸವ ಗಂಗಾ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಜರುಗಿದ ‘ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ’ ಕಾರ್ಯಕ್ರಮ ಉಚಿತವಾಗಿ ಬಿಪಿ ಪರೀಕ್ಷಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪೌಷ್ಠಿಕಾಂಶಗಳುಳ್ಳ ಆಹಾರ ಸೇವನೆ, ಶುದ್ಧವಾದ ನೀರನ್ನು ಕುಡಿಯುವುದು, ದಿನಕ್ಕೆ 7-8 ಗಂಟೆಗಳ ಕಾಲ ಗಾಡ ನಿದ್ರೆ, ನಿಯಮಿತವಾಗಿ ವ್ಯಾಯಾಮ, ಯೋಗ ಮಾಡುವುದು, ಸಕಾರಾತ್ಮಕ ಚಿಂತನೆ ಮಾಡುವುದು ಸೇರಿದಂತೆ ಮುಂತಾದ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಹೆಚ್ಚು ಹುಳಿ, ಖಾರ, ಉಪ್ಪು, ಎಣ್ಣೆಯಲ್ಲಿ ಕರಿದ ತಿನುಸುಗಳ ಸೇವನೆ ಬೇಡ. ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ಮಾಡಬೇಡಿ. ಅತಿಯಾದ ಮೊಬೈಲ್ ಬಳಕೆ, ಟಿ.ವಿ ವೀಕ್ಷಣೆ ಬೇಡ. ಆಗಾಗ್ಗೆ ಬಿಪಿ ಪರೀಕ್ಷೆ ಮಾಡಿಕೊಂಡು ವ್ಯತ್ಯಾಸವಾದರೆ ಜೀವನಶೈಲಿ ಬದಲಾವಣೆಯೊಂದಿಗೆ ಅದರ ಸಮತೋಲನ ನಿರ್ವಹಣೆ ಮಾಡಬೇಕು ಎಂದು ಎಂದು ಕೆಲವು ಪ್ರಮುಖ ಸಲಹೆ-ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಶಿವಶಂಕರ ಗುರುಮಠಕಲ್, ರಾಜಶೇಖರ ತಂಬಾಕೆ, ಮಹೇಶ್ ಕೋಡ್ಲಿ, ಸುಭಾಷ ಕೇಶ್ವಾರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *