ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಬೆನ್ನಲ್ಲೆ ಮುಂದಿನ 24-36 ಗಂಟೆಗಳಲ್ಲಿ ಭಾರತ ಕ್ರಮ ಸಾಧ್ಯತೆ: ಪಾಕ್ ಸಚಿವ

ಅಂತಾರಾಷ್ಟ್ರೀಯ

ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೆ ಭಾರತ ಸೇನಾಪಡೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಈ ಬೆಳವಣಿಗೆ ಪಾಕಿಸ್ತಾನಕ್ಕೆ ಆತಂಕ ಶುರುವಾಗುವಂತೆ ಮಾಡಿದೆ.

ಮೋದಿ ನಿರ್ಧಾರ ಬೆನ್ನಲ್ಲೆ ಭಾರತವು ಮುಂದಿನ 24 ರಿಂದ 36 ಗಂಟೆಗಳಲ್ಲಿ ತನ್ನ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳಲು ಯೋಜಿಸುತ್ತಿದೆ ಎಂದು ಪಾಕ್ ಸಚಿವ ಅತ್ತೌಲ್ಲಾ ತರಾರ್ ಎಚ್ಚರಿಕೆ ನೀಡಿದ್ದಾರೆ.

ಕಳೆದ ವಾರ ನಾಗರಿಕರ ಮೇಲೆ ನಡೆದ ಉಗ್ರಗಾಮಿ ದಾಳಿಯನ್ನು ಮುಂದಿನ ಮಿಲಿಟರಿ ಕ್ರಮಕ್ಕೆ “ನೆಪ”ವಾಗಿ ಬಳಸಲು ಭಾರತ ಉದ್ದೇಶಿಸಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಹೇಳಿದ್ದಾರೆ.

“ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿದೆ ಎಂಬ ಆಧಾರರಹಿತ ಮತ್ತು ಕಪೋಲಕಲ್ಪಿತ ಆರೋಪಗಳ ನೆಪದಲ್ಲಿ ಭಾರತ ಮುಂದಿನ 24-36 ಗಂಟೆಗಳಲ್ಲಿ ಪಾಕಿಸ್ತಾನದ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳಲು ಉದ್ದೇಶಿಸಿದೆ ಎಂಬ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಪಾಕಿಸ್ತಾನಕ್ಕೆ ಇದೆ” ಎಂದು ಅತ್ತೌಲ್ಲಾ ತರಾರ್ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬರೆದಿದ್ದು, ವಿಡಿಯೋ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಪಹಲ್ಗಾಮ್ ದಾಳಿಯ ಕುರಿತು “ತಟಸ್ಥ ಆಯೋಗದಿಂದ ವಿಶ್ವಾಸಾರ್ಹ, ಪಾರದರ್ಶಕ ಮತ್ತು ಸ್ವತಂತ್ರ ತನಿಖೆಗೆ” ಇಸ್ಲಾಮಾಬಾದ್ ಸಹಕರಿಸಲು ಸಿದ್ಧವಾಗಿದೆ ಎಂದು ಸಚಿವ ಹೇಳಿದ್ದು, ಭಾರತದ ಯಾವುದೆ ಮಿಲಿಟರಿ ಸಾಹಸಕ್ಕೆ ಖಚಿತವಾಗಿ ಮತ್ತು ನಿರ್ಣಾಯಕವಾಗಿ ಪ್ರತಿಕ್ರಿಯಿಸಲಾಗುವುದು ಎಂದು ಪಾಕಿಸ್ತಾನ ಪುನರುಚ್ಚರಿಸುತ್ತದೆ. ಅಂತರರಾಷ್ಟ್ರೀಯ ಸಮುದಾಯವು ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಏಪ್ರಿಲ್ 22ರಂದು ನಡೆದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಯ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ ಮಂಗಳವಾರ ನಡೆಯಿತು.

ಸಭೆಯಲ್ಲಿ ಪ್ರಧಾನಿ ಮೋದಿ ಅವರು ಮೂರು ಸೇನೆಗಳ ಮುಖ್ಯಸ್ಥರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್, ರಕ್ಷಣಾ ಸಚಿವ ರಾಜನಾಥಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಸಭೆ ನಡೆಸಿದರು.

ಈ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಮೂರು ಸೇವೆಗಳ ಮುಖ್ಯಸ್ಥರು ಭಾಗವಹಿಸಿದ್ದರು, ಉನ್ನತ ಮಟ್ಟದ ಸಭೆಯಲ್ಲಿ, ಭಯೋತ್ಪಾದನೆಗೆ ಹೀನಾಯ ಹೊಡೆತ ನೀಡುವುದು ರಾಷ್ಟ್ರೀಯ ಸಂಕಲ್ಪ ಎಂದು ಮೋದಿ ದೃಢಪಡಿಸಿದರು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

‘ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆಯ ವಿಧಾನ, ಗುರಿಗಳು ಮತ್ತು ಸಮಯವನ್ನು ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ “ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯ” ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉನ್ನತ ರಕ್ಷಣಾ ಸಂಸ್ಥೆಯ ಅಧ್ಯಕ್ಷತೆಯಲ್ಲಿ ಪ್ರತಿಪಾದಿಸಿದರು. ಅಂತೆಯೆ ಸಶಸ್ತ್ರ ಪಡೆಗಳ ವೃತ್ತಿಪರ ಸಾಮರ್ಥ್ಯಗಳಲ್ಲಿ ಮೋದಿ ಸಂಪೂರ್ಣ ನಂಬಿಕೆ ಮತ್ತು ವಿಶ್ವಾಸ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *