ಪರೋಪಕಾರ ಕಾರ್ಯ ಕೈಗೊಳ್ಳಿ: ತೆಂಗಳಿ ಶ್ರೀ

ಗ್ರಾಮೀಣ

ಚಿತ್ತಾಪುರ: ಭಗವಂತ ಕರುಣಿಸಿದ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಪ್ರತಿಯೊಬ್ಬರೂ ಕೈಲಾದಷ್ಟು ಸಮಾಜೋಪಯೋಗಿ, ಪರೋಪಕಾರಿ ಕಾರ್ಯ ಮಾಡಬೇಕು’ ಎಂದು ತೆಂಗಳಿ – ಮಂಗಲಗಿಯ ಡಾ. ಶಾಂತಸೋಮನಾಥ ಶಿವಾಚಾರ್ಯರು ಹೇಳಿದರು.

ಸಮೀಪದ ಟೆಂಗಳಿ ಗ್ರಾಮದ ಶಾಂತೇಶ್ವರ ಹಿರೇಮಠದಲ್ಲಿ ಶುಕ್ರವಾರ ರಾತ್ರಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ನಿಮಿತ್ಯ ಮುಗಳಖೋಡ ಶ್ರೀ ಯಲ್ಲಾಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆತ್ತವರ ಸೇವೆ ಮಾಡುವುದು ದೇವರ ಪೂಜೆಗಿಂತ ಶ್ರೇಷ್ಠ ಎಂದರು.

ಅನಿಶ್ಚಿತ ಬದುಕಿನಲ್ಲಿ ಶಾಶ್ವತವಾಗಿ ಉಳಿಯಲು ಎಲ್ಲರೂ ಸದ್ಗುಣ, ಸತ್ಯ, ಪ್ರಾಮಾಣಿಕತೆ, ಸಮಾನ ನಡೆ, ನುಡಿ ಸೇರಿದಂತೆ ಮಹೋನ್ನತ ದೈವಿ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಅಂದಾಗ ಮಾತ್ರ ನಮ್ಮ ಶರೀರ ಅಳಿದ ಮೇಲೂ ಜನ, ಸಮಾಜ ನಮ್ಮನ್ನು ನೆನೆಯುತ್ತದೆ ಎಂದರು.

ಪುರಾಣ – ಪ್ರವಚನ ಪ್ರವೀಣ ಉದಯಕುಮಾರ ಶಾಸ್ತ್ರಿ ಪುರಾಣ ಪಠಣ ಮಾಡಿದರು, ಸಂಗೀತ ಗುರುಶಾಂತಯ್ಯ ಸ್ಥಾವರಮಠ, ತಬಲಾ ವೀರಭದ್ರಯ್ಯ ಸ್ಥಾವರಮಠ ಸೇವೆ ಸಲ್ಲಿಸಿದರು.

ಮುಖಂಡರಾದ ರೇವಶೆಟ್ಟಿ ತುಪ್ಪದ, ಶಾಮರಾವ ಮಾಲಿಪಾಟೀಲ, ಬಸವರಾಜ ಭೈರಿ, ಶಾಂತಕುಮಾರ ಪಾಟೀಲ ಮಂಗಲಗಿ, ರಮೇಶ ಜಾಧವ, ನಾಗೇಂದ್ರಪ್ಪ ಮುಧೊಳ್ಳಿ, ನಾಗೇಂದ್ರ. ಭುವನಗಿರಿ ಸೇರಿದಂತೆ ತೆಂಗಳಿ ಮತ್ತು ಮಂಗಲಗಿ ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *