ಕಲಬುರಗಿ: ಆರೋಗ್ಯವಂತ ಮಗು ಪಡೆಯಬೇಕಾದರೆ, ಸದೃಢ, ಆರೋಗ್ಯಯುತ ತಾಯಂದಿರಿರಬೇಕು. ಸಾಮಾನ್ಯವಾಗಿ ತಾಯಂದಿರು ರಕ್ತಹೀನತೆ ಸಮಸ್ಯೆ ಎದುರಿಸುತ್ತಾರೆ. ಶುದ್ದವಾದ ಕುಡಿಯುವ ನೀರಿನ ಸೇವನೆ, ದಿನಕ್ಕೆ 7-8ರಿಂದ ಗಂಟೆಗಳ ಕಾಲ ಗಾಡ ನಿದ್ರೆ, ವ್ಯಾಯಾಮ, ಯೋಗ, ಧನಾತ್ಮಕ ಚಿಂತನೆ, ಎಣ್ಣೆಯಲ್ಲಿ ಹುರಿದ, ಕರಿದ ಮಸಾಲೆಯುಕ್ತ, ಹೆಚ್ಚು ಹುಳಿ, ಖಾರ, ಉಪ್ಪು ಇರುವ ಆಹಾರ ಸೇವನೆ ಮಾಡದಿರುವ ಮತ್ತಿತರ ಆರೋಗ್ಯಕರ ಕ್ರಮಗಳನ್ನು ಪಾಲಿಸುವ ಮೂಲಕ ತಾಯಂದಿರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡರೆ ಸುರಕ್ಷಿತ ಮಾತೃತ್ವ ಸಾಧ್ಯವಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.
ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಮಾತೃತ್ವ ಹೊಂದಿರುವ ಮಹಿಳೆಯರು ಅನೀಮಿಯಾ ಜೊತೆಗೆ ಇತ್ತಿಚಿಗೆ ಥೈರಾಯಿಡ್ ಸಮಸ್ಯೆ ಕೂಡಾ ಎದುರಿಸುತ್ತಿದ್ದಾರೆ. ಇದನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆದು ನಿವಾರಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಸುಮಾರು ಶೇ.50ರಷ್ಟು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದರಿಂದ ಅಸಮರ್ಪಕ ಭ್ರೂಣದ ಬೆಳವಣಿಗೆ, ಕಡಿಮೆ ತೂಕದ ಶಿಶು ಜನನ, ನರ ಕೊಳವೆಯಲ್ಲಿನ ದೋಷ, ಪ್ರಸವಪೂರ್ವ ಮರಣ, ಅವದಿ ಪೂರ್ವ ಜನನ, ಹೆರಿಗೆಯ ನಂತರ ರಕ್ತಸ್ರಾವ, ತಾಯಿಯ ಮರಣದಂತಹ ಸಮಸ್ಯೆಗಳು ಉಂಟಾಗುತ್ತವೆ. ಗರ್ಭಿಣಿಯರು ಸಮತೋಲಿತ ಆಹಾರ, ತಾಜಾ ಮತ್ತು ಹಸಿರು ಸೊಪ್ಪು, ತರಕಾರಿಗಳು, ಮೊಳಕೆ ಕಾಳುಗಳು, ದ್ವ್ವಿದಳ ಧಾನ್ಯಗಳು, ಹಣ್ಣು-ಹಂಪಲುಗಳು, ಮೊಳಕೆ ಕಾಳುಗಳು ನಿಯಮಿತವಾಗಿ ಸೇವಿಸಿದರೆ ರಕ್ತಹೀನತೆ ಉಂಟಾಗುವುದಿಲ್ಲ ಎಂದು ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಸದಸ್ಯರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ಮಲ್ಲಿನಾಥ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ಸಂಗಮ್ಮ ಅತನೂರ, ಮಂಗಲಾ ಚಂದಾಪುರ, ಅರ್ಚನಾ ಸಿಂಗೆ, ನಾಗೇಶ್ವರಿ ಮುಗಳಿವಾಡಿ, ರೇಶ್ಮಾ ನಕ್ಕುಂದಿ, ಚಂದಮ್ಮ ಮರಾಠ, ಲಕ್ಷ್ಮಿ ಮೈಲಾರಿ, ಶ್ರೀದೇವಿ ಸಾಗರ, ಸಿದ್ರಾಮ, ಬಡಾವಣೆಯ ಪ್ರಮುಖ ಮಹಿಳಾ ತಾಯಂದಿರಾದ ಗಿರಿಜಾ, ಫಾತಿಮಾ, ಭಾಗ್ಯಶ್ರೀ, ಜೀವಿಕಾ, ಪ್ರಿಯಾಂಕಾ, ಪೂಜಾ, ರೇಣುಕಾ ಸೇರಿದಂತೆ ಬಡಾವಣೆಯ ಅನೇಕ ಮಹಿಳೆಯರು, ನಾಗರಿಕರು, ಮಕ್ಕಳು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.