ಕಲಬುರಗಿ: ಸಾಮಾನ್ಯವಾಗಿ ಯಾವುದೆ ಕಾಯಿಲೆಯ ಲಕ್ಷಣ ಕಂಡುಬಂದು ಆಸ್ಪತ್ರೆಗೆ ತೆರಳಿದಾಗ ವೈದ್ಯರು ಮೊದಲು ಬಾಯಿಯನ್ನು ಪರಿಶೀಲಿಸುವರು. ಹಲ್ಲುಗಳು, ನಾಲಿಗೆ, ಗಂಟಲು ಸೇರಿದಂತೆ ಬಾಯಿಯ ಆರೋಗ್ಯದಲ್ಲಿ ಏರು-ಪೇರಾದಾಗ ಅದರ ಪರಿಣಾಮ ದೇಹದ ಇತರೆ ಭಾಗಗಳಿಗೆ ಕೂಡಾ ಆಗುತ್ತದೆ. ಆದ್ದರಿಂದ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಹೇಳಿದರು.
ನಗರದ ಶೇಖರೋಜಾದ ಶಹಾಬಜಾರ ಯುಪಿಎಚ್‌ಸಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಜರುಗಿದ ‘ವಿಶ್ವ ಬಾಯಿ ಆರೋಗ್ಯ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಹಲ್ಲುಗಳ ರಕ್ಷಣೆಗ ದಿನಕ್ಕೆ ಎರಡು ಸಲ ಬ್ರಷ್ ಮಾಡಿ. ಹಲ್ಲುಗಳಲ್ಲಿ ಚೂಪಾದ ವಸ್ತುಗಳನ್ನು ಹಾಕಬಾರದು. ಗುಟಕಾ, ಧೂಮಪಾನ ಸೇವನೆ ಬೇಡ. ಹಲ್ಲುಗಳು, ನಾಲಿಗೆ, ಗಂಟಲಿನ ಸ್ವಚ್ಚತೆ ಕಾಪಾಡಿಕೊಳ್ಳಿ. ಸ್ವಲ್ಪ ಬಿಸಿ ನೀರಿನಲ್ಲಿ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿ ಉಗಳಬೇಕು. ತರಕಾರಿ, ಹಣ್ಣುಗಳನ್ನು ಸೇವಿಸಬೇಕು. ಜಂಕ್ ಪುಡ್, ಎಣ್ಣೆಯಲ್ಲಿ ಕರಿದ, ಹುರಿದ ಆಹಾರ ಸೇವನೆ ಮಾಡಬೇಬಾರದು. ಬಾಯಿಯ ಆರೋಗ್ಯದಲ್ಲಿ ಏನಾದರು ತೊಂದರೆ ಕಂಡುಬಂದರೆ ತಜ್ಞ ವೈದ್ಯರಿಂದ ಸೂಕ್ತ ಸಲಹೆ, ಚಿಕಿತ್ಸೆ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಚಂದ್ರಕಲಾ ಮಠಪತಿ, ಚಂದಮ್ಮ ಮರಾಠಾ ಸೇರಿದಂತೆ ಸಿಬ್ಬಂದಿ, ಬಡಾವಣೆಯ ನಾಗರಿಕರು, ಮಹಿಳೆಯರು ಸೇರಿದಂತೆ ಅನೇಕರು ಇದ್ದರು.