ವೃತ್ತಿ ಕುಂಬಾರರಿಗೆ ಆರ್ಥಿಕ ಭದ್ರತೆ ದೊರೆಯಲಿ

ಜಿಲ್ಲೆ

ಕಲಬುರಗಿ: ಕುಂಬಾರಿಕೆಗೆ ಆಧುನಿಕತೆಯಿಂದ ವೃತ್ತಿಗೆ ತೊಂದರೆಯಾಗುತ್ತಿದೆ. ಕಷ್ಟದ ಸ್ಥಿತಿಯಲ್ಲಿಯೂ ವೃತ್ತಿ ಕಾಪಾಡಿಕೊಂಡು ಬರುತ್ತಿರುವ ವೃತ್ತಿ ಕುಂಬಾರರಿಗೆ ಆರ್ಥಿಕ ಭದ್ರತೆಯ ಯೋಜನೆಗಳು ಸಮರ್ಪಕವಾಗಿ ದೊರೆಯಬೇಕಾಗಿದೆ ಎಂದು ಸಮಾಜ ಸೇವಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಶೆಟ್ಟಿ ಟಾಕೀಸ್ ಸಮೀಪದ ವೃತ್ತಿ ಕುಂಬಾರ ಶಿವಶರಣಪ್ಪ ಕುಂಬಾರ ಅವರಳ್ಳಿ ಅವರಿಗೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಗೃಹ ಕೈಗಾರಿಕೆಯಲ್ಲಿ ಕುಂಬಾರಿಕೆ ಒಂದು. ಈ ವೃತ್ತಿಗೆ ಮಣ್ಣೆ ಆಧಾರ. ಮಣ್ಣಿನೊಂದಿಗೆ ಬೆರೆತು ಮಾಡುವ ಪವಿತ್ರ ಕಾಯಕ ಕುಂಬಾರಿಯಾಗಿದೆ ಎಂದರು.

ಈಗಾಗಲೆ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ತಂಪಾದ ನೀರು ಸೇವಿಸಬೇಕು ಎಂದು ಎಲ್ಲರ ಬಯಕೆಯಾಗುತ್ತದೆ. ಫ್ರಿಜ್‌ನಲ್ಲಿ ಶೇಖರಿಸಿ ಸೇವಿಸಿದ ನೀರು ದೇಹಕ್ಕೆ ಹಿತಕರವಲ್ಲ. ಬದಲಿಗೆ ಮಣ್ಣಿನ ಮಡಿಕೆಯಲ್ಲಿನ ನೀರು ಸೇವಿಸಬೇಕು. ‘ಬಡವರ ಫ್ರಿಜ್’ ಎಂದು ಕರೆಸಿಕೊಳ್ಳುವ ಮಡಿಕೆಗಳು ಕಡಿಮೆ ಬೆಲೆಗೆ ದೊರೆಯುತ್ತವೆ. ಇವುಗಳನ್ನು ಖರೀದಿ ಮಾಡುವುದರಿಂದ ಕುಂಬಾರಿಕೆ ವೃತ್ತಿಗೆ ಸಹಾಯ ಮಾಡಿದಂತಾಗುತ್ತದೆ. ಹಿಂದಿನ ಕಾಲದಲ್ಲಿ ಹಿರಿಯರು ಅಡಿಗೆ ಮಾಡಲು, ನೀರು ಕಾಯಿಸಲು, ನೀರು ಕುಡಿಯಲು ಮಡಿಕೆ ಬಳಸುತ್ತಿದ್ದರು. ಇದರಿಂದ ಅವರು ಆರೋಗ್ಯವಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ಶಿವಶರಣಪ್ಪ ಕುಂಬಾರ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಚಂದ್ರಕಾಂತ ಸಾವಳಗಿ, ದಿಲಿಪ ಕಿರಸಾವಳಗಿ, ಮಹಾಂತೇಶ ಹರವಾಳ, ಅಪ್ಪು ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *