ಕನ್ನಡ ನಿತ್ಯ ಬಳಕೆಯಲ್ಲಿದ್ದರೆ ಮಾತ್ರ ನಾಡು- ನುಡಿ ಉಳಿವು: ತಹಸೀಲ್ದಾರ್ ನಾಗಯ್ಯ ಹಿರೇಮಠ

ಪಟ್ಟಣ

ಸುದ್ದಿ ಸಂಗ್ರಹ ಚಿತ್ತಾಪುರ
ಕನ್ನಡವು ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದು. ಈ ಭಾಷೆಯನ್ನು ನಿರಂತರವಾಗಿ ಮಾತನಾಡಿ, ಕಲಿಸಿ, ಬಳಸಿಕೊಂಡು ಬಂದರೆ ಮಾತ್ರ ನಮ್ಮ ನಾಡು ಹಾಗೂ ನುಡಿ ಉಳಿಯಲು ಸಾಧ್ಯ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ವರುಣ ನಗರದ ಶ್ರೀಗುರು ರಾಘವೇಂದ್ರ ಟ್ರಸ್ಟ್ ದಿ. ಶೇಷಗಿರಿರಾವ ಎಸ್ ಕುಲಕರ್ಣಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕವು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಸಿರಿನುಡಿ ಸಂಭ್ರಮ–2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಅಮೂಲ್ಯ ಸೇವೆ ಸಲ್ಲಿಸುತ್ತಾ ಬಂದಿದೆ ಎಂದು ಪ್ರಶಂಸಿಸಿದರು.

ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ. ಒಂದು ಕಾಲದಲ್ಲಿ ಉತ್ತರ ನರ್ಮದಾ ನದಿವರೆಗೂ ಕನ್ನಡಿಗರ ಪ್ರಾಬಲ್ಯವಿತ್ತು. ಇಂದು ಕನ್ನಡಿಗರು ಹೆಚ್ಚಾಗಿರುವ ಸೊಲ್ಲಾಪುರ, ಕಾಸರಗೋಡು, ತಾಂಡೂರು, ಆಲೂರು ಮುಂತಾದ ಪ್ರದೇಶಗಳು ನಮ್ಮಿಂದ ದೂರವಾಗಿರುವುದು ದುಃಖದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು. ಭಾಷೆ ಎಂಬುದು ಕೇವಲ ಸಂವಹನದ ಸಾಧನ ಮಾತ್ರವಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ಗುರುತು. ಆದ್ದರಿಂದ ಕನ್ನಡವನ್ನು ಮನೆಮಾತಾಗಿ ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ರಾಯಚೂರ ಕೃಷಿ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ವೀರಣ್ಣಗೌಡ ಪರಸರೆಡ್ಡಿ ಮಾತನಾಡಿ, ತಾಲೂಕು ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ಆಯೋಜಿಸುವ ಅಗತ್ಯವಿದೆ. ಈ ಸಂಬಂಧ ನಿಯೋಗದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಚರ್ಚಿಸಬೇಕೆಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್ ಮಾತನಾಡಿ, ಮಕ್ಕಳಲ್ಲಿ ಓದು ಮತ್ತು ಸಾಹಿತ್ಯಾಸಕ್ತಿ ಬೆಳೆಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಪರಿಷತ್ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಲಿದೆ. ‘ಸಾಹಿತ್ಯ ನಡೆ ನಿಮ್ಮ ಕಡೆ’ ಎಂಬ ಕಾರ್ಯಕ್ರಮದ ರೂಪುರೇಷೆ ಈಗಾಗಲೇ ಸಿದ್ಧವಾಗಿದ್ದು, ಶೀಘ್ರದಲ್ಲೆ ಜಾರಿಗೊಳ್ಳಲಿದೆ ಎಂದು ಮಾಹಿತಿ ನೀಡಲಾಯಿತು.

ಎಲ್ಲಾ ವಲಯ ಮಟ್ಟದ ಶಾಲಾ- ಕಾಲೇಜುಗಳಲ್ಲಿ ಸಾಹಿತ್ಯ ಚಟುವಟಿಕೆ ಹೆಚ್ಚಿಸಬೇಕಾಗಿದೆ. ಪ್ರತಿ ವರ್ಷ ಕನಿಷ್ಠ 30 ಜನ ಹೊಸ ಸಾಹಿತಿಗಳು ಸಮಾಜಕ್ಕೆ ಲಭಿಸುವಂತೆ ಪ್ರಯತ್ನ ನಡೆಯಬೇಕು ಎಂದು ಸಲಹೆ ನೀಡದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಮಾತನಾಡಿ, ಕನ್ನಡದ ಮೇಲಿನ ನಿರ್ಲಕ್ಷ್ಯ ಅಪಾಯಕಾರಿ ಬೆಳವಣಿಗೆ. ಭಾಷೆ ತಾಯಿಯ ಸಮಾನ ಅದನ್ನು ಮಮತೆಯಿಂದ ಪೋಷಿಸಬೇಕು. ಕನ್ನಡ ಓದು–ಬರಹ ಕಡಿಮೆಯಾದರೆ ಮುಂದೆ ಸಾಹಿತಿಗಳ ಕೊರತೆ ತೀವ್ರವಾಗಲಿದೆ ಎಂದು ಎಚ್ಚರಿಸಿದರು.

ಗೌರವಾಧ್ಯಕ್ಷ ವಿರೇಂದ್ರಕುಮಾರ ಕೊಲ್ಲೂರ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ಆಸಕ್ತಿಯಿಂದ ಜಿಲ್ಲೆಯಲ್ಲಿಯೇ ಅದ್ದೂರಿಯಾಗಿ 4 ತಾಲೂಕು ಸಮ್ಮೇಳನಗಳು ನಡೆದಿವೆ ಹಾಗೂ ಕನ್ನಡ ಭವನ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಸಚಿವರು ಇನ್ನೂ 50 ಲಕ್ಷ ರೂ ಮಂಜೂರು ಮಾಡಿದ್ದಾರೆ ಎಂದರು.

ಶ್ರೀಗುರು ರಾಘವೇಂದ್ರ ಟ್ರಸ್ಟ್ ಕಾರ್ಯದರ್ಶಿ ರವಿ ಎಸ್ ಕುಲಕರ್ಣಿ ಮಾತನಾಡಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ
ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಚಂದ್ರಶೇಖರ ಬಾಚನೂರು (ಕೃಷಿ), ಪ್ರತಿಕಾ (ನೃತ್ಯ), ಶಂಭುಲಿಂಗ ವಿಶ್ವಕರ್ಮ (ಕಲೆ), ಸೋಮಶೇಖರ ಕಲಶೆಟ್ಟಿ (ಶಿಕ್ಷಣ), ಶರಣಪ್ಪ ಹಡಪದ (ನಾಟಕ), ಬಸವರಾಜ ಡೋಣಗಾಂವ (ಸಾಹಿತ್ಯ), ಅಯ್ಯಣ್ಣ ಮಾಸ್ಟರ್ (ಸಂಗೀತ),
ನದೀಮ್ ಸಾಬ್ ಹೊನ್ಸೂರ್ (ಜಾನಪದ), ಉಮೇಶಬಾಬು ಸಾಸಬಾಳ (ಚಿತ್ರಕಲೆ), ನರಸಿಂಹ ಕುಲಕರ್ಣಿ (ಸಾಮಾಜಿಕ)
ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಭಾಗ್ಯಶ್ರೀ (ಪ್ರಥಮ), ಎಸ್‌ಎಸ್‌ಕೆ ಪ್ರೌಢ ಶಾಲೆಯ ಸಿದ್ದಮ್ಮ (ದ್ವಿತೀಯ), ಸರ್ಕಾರಿ ಆದರ್ಶ ವಿದ್ಯಾಲಯದ ನಂದೀಶ (ತೃತೀಯ) ಅವರಿಗೆ ಕ್ರಮವಾಗಿ 1,500 ರೂ, 1,000 ರೂ ಹಾಗೂ 500 ರೂ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ನಾಲವಾರ, ಪ್ರಮುಖರಾದ ಚಂದ್ರಶೇಖರ ಲೇವಡಿ, ಮಹ್ಮದ್ ಇಬ್ರಾಹಿಂ, ವರುಣಕುಮಾರ ಕುಲಕರ್ಣಿ, ನರಸಿಂಹ ಆಲಮೇಲಕರ್, ಸಾಬಣ್ಣ ಮಾಸ್ಟರ್, ದೇವೇಂದ್ರಪ್ಪ ಶಹಾಬಾದ್, ಲಿಂಗಣ್ಣ ಮಲ್ಕನ್, ವೀರೇಶ ಮಕಾಪ್, ಅಂಬರೀಷ್ ಸುಲೇಗಾಂವ್, ಶ್ರೀಕಾಂತ ಸುಲೇಗಾಂವ್, ಕೋಟೇಶ್ವರ ರೇಷ್ಮೆ, ಆನಂದ ಪಾಟೀಲ್ ನರಿಬೋಳಿ, ಚಂದ್ರಶೇಖರ ಬಳ್ಳಾ ಮಹೇಶ ಬಾಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಭಾಗ್ಯಶ್ರೀ ಪ್ರಾರ್ಥಿಸಿದರು, ಲಲಿತಮ್ಮ ರೇಷ್ಮೆ ಸ್ವಾಗತಿಸಿದರು, ನರಸಪ್ಪ ಚಿನ್ನಕಟ್ಟಿ ನಿರೂಪಿಸಿದರು ಮತ್ತು ಸಂಗಮೇಶ ರೋಣದ ವಂದಿಸಿದರು.

Leave a Reply

Your email address will not be published. Required fields are marked *