ಚಿತ್ತಾಪುರ: 21ನೇ ಶತಮಾನದ ವಿಜ್ಞಾನ ತಂತ್ರಜ್ಞಾನದ ಕಾಲವು ಅನೇಕ ಆವಿಷ್ಕಾರ ನಡೆಯುತ್ತಿರುವ ಸಮಯದಲ್ಲಿ ಪ್ರತಿಯೊಬ್ಬರು ವಿಜ್ಞಾನದ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ರಾವೂರ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಕ್ರಿಯಾಶೀಲತೆ ಹಾಗೂ ಸೃಜನಶಿಲತೆ ಬೆಳೆಸಲು ವಿಜ್ಞಾನ ವಸ್ತು ಪ್ರದರ್ಶನ ಪೂರಕವಾಗಿ ಕೆಲಸಮಾಡುತ್ತದೆ. ಆಸಕ್ತಿ ಇದ್ದಾಗ ಮಾತ್ರ ಏನಾದರೊಂದು ಸಾಧನೆ ಮಾಡಲು ಸಾಧ್ಯ. ಆದ್ದರಿಂದ ಮಕ್ಕಳು ವಿಜ್ಞಾನದ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಿ ಹೊಸ ಆವಿಷ್ಕಾರ ಮಾಡುವ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಬಿಆರ್’ಸಿ ರಮೇಶ್ ಮಾತನಾಡಿ, ಮಠದ ಮಕ್ಕಳು ತಮ್ಮ ಪ್ರತಿಭೆ ಬಳಸಿ ಉತ್ತಮ ಪ್ರಯೋಗಗಳು, ಮಾಡೆಲ್ ಮತ್ತು ಚಾರ್ಟ್’ಗಳನ್ನು ತಯಾರಿಸಿದ್ದಾರೆ. ಮಕ್ಕಳಲ್ಲಿ ಪ್ರತಿಭೆ ಇದೆ, ಅದನ್ನು ಗುರುತಿಸಿ ಹೊರತರುವ ಪ್ರಯತ್ನ ಇಲ್ಲಿನ ವಿಜ್ಞಾನ ಶಿಕ್ಷಕಿಯರು ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಹಕಾರ್ಯದರ್ಶಿ ಈಶ್ವರ ಬಾಳಿ, ಮುಖ್ಯಗುರು ವಿದ್ಯಾಧರ ಖಂಡಾಳ, ವಿಜ್ಞಾನ ಶಿಕ್ಷಕಿಯರಾದ ಸುಗುಣಾ ಕೊಳಕೂರ, ಗೀತಾ ಜಮಾದಾರ, ಸುವರ್ಣ ಮಠಪತಿ, ಸಿದ್ದಲಿಂಗ ಬಾಳಿ, ಶಿವಕುಮಾರ ಸರಡಗಿ, ವಿಜಯಲಕ್ಷ್ಮಿ ಬಮ್ಮನಳ್ಳಿ ಸೇರಿದಂತೆ ಶಿಕ್ಷಕರು, ಪಾಲಕರು, ಮಕ್ಕಳು ಉಪಸ್ಥಿತರಿದ್ದರು.