ಇನ್ನುಮುಂದೆ 10 ನಿಮಿಷದಲ್ಲಿ ಮುಗಿಯುತ್ತೆ ಜಮೀನು ಸರ್ವೆ

ರಾಜ್ಯ

ಬೆಂಗಳೂರು: ಜಮೀನು ಸರ್ವೆ ಮಾಡುವ ವಿಧಾನದಲ್ಲಿ ಕಂದಾಯ ಇಲಾಖೆಯು ಐತಿಹಾಸಿಕ ಬದಲಾವಣೆ ತಂದಿದೆ. ದಶಕಗಳಿಂದ ಚಾಲ್ತಿಯಲ್ಲಿದ್ದ ಚೈನ್ ಹಿಡಿದು ಜಮೀನು ಅಳತೆ ಮಾಡುವ ಪದ್ಧತಿಗೆ ಗುಡ್‌ಬೈ ಹೇಳಿದೆ. ಚೈನ್‌ ಬದಲಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್‌ ಭೂ ಮಾಪಕರಿಗೆ ವಿತರಿಸಿದೆ.

ಸರ್ವೆ ಆಯುಕ್ತರ ಕಚೇರಿಯಲ್ಲಿ ಫೆ.20 ರಂದು ಗುರುವಾರ ನಡೆದ ಕಾರ್ಯಕ್ರಮದಲ್ಲಿ 465 ಭೂ ಮಾಪಕರಿಗೆ ಈ ಆಧುನಿಕ ತಂತ್ರಜ್ಞಾನವುಳ್ಳ ರೋವರ್ ಅನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ವಿತರಿಸಿದರು.

ಸರ್ವೆ ಕೆಲಸವನ್ನು ಮೊದಲಿನಿಂದಲೂ ಚೈನ್ ಹಿಡಿದು ಭೂಮಿ ಅಳೆಯುವ ಸಂಪ್ರದಾಯ ಚಾಲ್ತಿಯಲ್ಲಿತ್ತು. ಬಿಸಿಲಿನಲ್ಲಿ ಸರ್ವೆಯರ್ ಜೊತೆಗೆ ಇಬ್ಬರು ಸಹಾಯಕರು ಕೆಲಸ ಮಾಡಬೇಕಾಗಿತ್ತು. ಸರ್ವೆ ಮಾಡಲು ಕನಿಷ್ಟ 70 ನಿಮಿಷ ಹಾಗೂ ಅದನ್ನು ನಕ್ಷೆ ಮಾಡಲು 3 ಗಂಟೆ ಸಮಯ ವ್ಯರ್ಥವಾಗುತ್ತಿತ್ತು. ಆದರೆ ಈ ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಈ ಕೆಲಸವನ್ನು ಕೇವಲ 10 ನಿಮಿಷದಲ್ಲಿ ಪೂರ್ಣಗೊಳಿಸಲಿದೆ ಎಂದು ಸಚಿವ ಕೃಷ್ಣಬೈರೇಗೌಡ ವಿವರಿಸಿದರು.

ರಾಜ್ಯದಲ್ಲಿ 1830 ರಿಂದ 1870ರ ವರೆಗೆ ಮಾತ್ರ ಸರ್ವೆ ಕೆಲಸ ಆಗಿದೆ. 1967ರಲ್ಲಿ ಅಲ್ಪಸ್ವಲ್ಪ ಸರ್ವೆ ಆಗಿದೆ ಅನ್ನೊದು ಬಿಟ್ಟರೆ ಉಳಿದಂತೆ ಸರ್ವೆ ಕಾರ್ಯ ಆಗಿಲ್ಲ. ಈಗ ರೈತರ ನಾನಾ ಸಮಸ್ಯೆಗಳಿಗೆ ಸರ್ವೆ ಹಾಗೂ ರೀ ಸರ್ವೆ ಕೆಲಸಗಳ ವೇಗ ಹೆಚ್ಚಿಸಬೇಕಾಗಿದೆ. ಆದರೆ 1806 ರಿಂದಲೂ ಸರ್ವೆ ಕೆಲಸಗಳಿಗೆ ಬಳಸಿದ ಚೈನ್ ವ್ಯವಸ್ಥೆಯನ್ನೆ ಈಗಲೂ ಮುಂದುವರಿಸುತ್ತಿರುವದು ಆಘಾತಕಾರಿ ಎಂದರ.

ಕಳೆದ 200 ವರ್ಷದಲ್ಲಿ ಪ್ರಪಂಚ ಇಷ್ಟೆಲ್ಲ ಬದಲಾದರು ನಮ್ಮ ಕಾರ್ಯವಿಧಾನ ಹಾಗೆ ಇದೆ. ಪ್ರಪಂಚದ ಮುಖ ಅಂತರಾಳ ಬದಲಾದರು, ಕಂದಾಯ ಇಲಾಖೆ ಕೆಲಸ ಮಾಡುವ ರೀತಿ ನೀತಿ ಮಾತ್ರ ಬದಲಾಗಿಲ್ಲ. ಸರ್ವೆ ಕೆಲಸ ತಾಂತ್ರಿಕಗೊಳಿಸದೆ, ಕೆಲಸ ಮಾಡಲು ಜನ ಇದ್ದಾರೆ ಎಂದು ಉಡಾಫೆಯಿಂದ ನೌಕರರ ಮೇಲೆ ಹೊರೆ ಹಾಕುವದು ಅಮಾನವೀಯ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ನಡವಳಿಕೆ ಎಂದು ಬೇಸರ ವ್ಯಕ್ತಪಡಿಸಿದರು.

ಚೈನ್ ಸರ್ವೆ ಕೆಲಸದಲ್ಲಿ ಕೆಲವರು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಸರ್ವೆಯಲ್ಲಿ ಬದಲಾವಣೆ ಮಾಡಬಹುದು. ಇದರಿಂದ ಹಲವರು ಇಂದಿಗೂ ಕೋರ್ಟು ಕಚೇರಿಗಳಿಗೆ ಅಲೆಯುವಂತಾಗಿದೆ. ಆದರೆ ರೋವರ್ ಸರ್ವೆಯಲ್ಲಿ ಇಂತಹ ಅಕ್ರಮಗಳಿಗೆ ಅವಕಾಶ ಇರುವದಿಲ್ಲ. ಹೀಗಾಗಿ ಇಲಾಖೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಜನರಿಗೆ ತ್ವರಿತ ಸರ್ವೆ ಮಾಡಿಕೊಡುವದು ಹಾಗೂ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆ ಮಾಡುವದು ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ಎಲ್ಲ ಭೂ ಮಾಪಕರಿಗೂ ಈ ರೋವರ್ ನೀಡುವದು ನಮ್ಮ ಗುರಿ ಎಂದರು.

ಈ ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಟಾರಿಯಾ, ಕಂದಾಯ ಆಯುಕ್ತ ಸುನೀಲಕುಮಾರ ಹಾಗೂ ಭೂ ಮಾಪನ ಇಲಾಖೆ ಆಯುಕ್ತ ಮಂಜುನಾಥ ಸೇರಿದಂತೆ ಇಲಾಖೆ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *