ಕಲಬುರಗಿ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ದೇಶ ಕಟ್ಟುವ ಕಾರ್ಯಕ್ಕೆ ನಿರಂತರವಾಗಿ ಸಹಕಾರ, ಶ್ರಮವಹಿಸಿದ ಮಾತೆ ರಮಾಬಾಯಿ ಅಂಬೇಡ್ಕರ್ ಅವರ ತ್ಯಾಗ, ಸಾಮಾಜಿಕ ತುಡಿತ, ಕೊಡುಗೆಯನ್ನು ವಿದ್ಯಾರ್ಥಿ ದೆಸೆಯಿಂದಲೇ ಪರಿಚಯಿಸುವ ನಿಟ್ಟಿನಲ್ಲಿ ಅವರ ಚರಿತೆಯನ್ನು ಪಠ್ಯಕ್ಕೆ ಸೇರ್ಪಡೆಯಾಗಬೇಕು. ಸರ್ಕಾರದ ವತಿಯಿಂದ ಜಯಂತಿ ಆಚರಿಸಬೇಕು. ಮರಣೋತ್ತರವಾಗಿ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಸಾಮಾಜಿಕ ಹೋರಾಟಗಾರ, ಚಿಂತಕ ಡಾ.ಸುನೀಲಕುಮಾರ ಎಚ್.ವಂಟಿ ಸರ್ಕಾರಕ್ಕೆ ಒತ್ತಾಸೆ ಮಾಡಿದರು.
ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಸಮೀಪದ ಬ್ಯಾಂಕ್ ಕಾಲೋನಿಯ ಉದ್ಯಾನವನದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ, ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕ ಮತ್ತು ಬ್ಯಾಂಕ್ ಕಾಲನಿ ಕ್ಷೇಮಾಭಿವೃದ್ಧಿ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ‘ಮಾತೆ ರಮಾಬಾಯಿ ಅಂಬೇಡ್ಕರ್‌ರ 127ನೇ ಜನ್ಮದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಡಾ.ಬಿ.ಆರ್ ಅಂಬೇಡ್ಕರ್ ಪದವಿ ಕಾಲೇಜಿನ ಉಪನ್ಯಾಸಕ ಡಾ.ಗಾಂಧಿ ಮೋಳಕೆರೆ, ಮಾತೆ ರಮಾಬಾಯಿ ಅಂಬೇಡ್ಕರ್‌ರ ತ್ಯಾಗ ಮರೆಯುವಂತಿಲ್ಲ. ಸಮಸ್ಥ ಮಹಿಳೆಯರಿಗೆ ಆದರ್ಶಪ್ರಾಯರಾಗಿದ್ದಾರೆ. ತಮ್ಮ ಮದುವೆಗೆ ಮುಂಚೆ ಅನಕ್ಷರಸ್ಥರಾಗಿದ್ದು, ಮದುವೆಯ ನಂತರ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ಅಕ್ಷರಸ್ಥರಾದರು. ತಾವು ಅನಕ್ಷರಸ್ಥರಾಗಿದ್ದಾಗ ತಮಗೆ ಆಗುತ್ತಿದ್ದ ತೊಂದರೆ, ಅನ್ಯಾಯವನ್ನು ಮನಗಂಡು, ನನ್ನಂತೆ ಬೇರೆ ಮಹಿಳೆಗೆ ಸಮಸ್ಯೆಯಾಗಬಾರದೆಂದು ತಮ್ಮ ಪತಿಯ ಜೊತೆಗೂಡಿ ಇಡೀ ಜೀವನದುದ್ದಕ್ಕೂ ಶೋಷಿತರು, ಮಹಿಳೆಯರ ಶಿಕ್ಷಣ, ಹಕ್ಕುಗಳನ್ನು ದೊರಕಿಸಿಕೊಡಲು ಹೋರಾಟ ಮಾಡುವ ಮೂಲಕ ಅನನ್ಯವಾದ ಸಾಮಾಜಿಕ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ, ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಬಸವರಾಜ ತೋಟದ, ಮಹಿಳಾ ಚಿಂತಕಿ ರಮಾಬಾಯಿ ಜಿ.ಸಣ್ಣುರ, ಸಮಾಜ ಸೇವಕ ಅಂಬಣ್ಣ ಚೌಧರಿ, ರಾಜು ಆಲೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮನೋಹರ ಗಾಯಕವಾಡ, ಮಹಾದಪ್ಪ ಬೋರೆ, ರಾಯಪ್ಪ ಹೊಸಮನಿ, ಶಿವಪುತ್ರ ಕುಮಸಿಕರ್, ದಶರಥ ದುಮ್ಮನಸುರ, ಭರತ ನಾಯಕ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ವಿಜಯಕುಮಾರ ಕಂಬಾರ, ಸುಜಯ್ ಎಸ್.ವಂಟಿ, ಗೌತಮ ಪಾಳಾ, ಉಮೇಶ ಪಾಳಾ ಸೇರಿದಂತೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.