ಚಿತ್ತಾಪುರ: ನಾಲವಾರದ ಸದ್ಗುರು ಕೋರಿಸಿದ್ದೇಶ್ವರ ಸಂಸ್ಥಾನ ಮಠವು ನನ್ನಂತಹ ಅನೇಕ ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸಿದ ಆಶ್ರಯಧಾಮ ಎಂದು ಕನ್ನಡದ ಖ್ಯಾತ ಚಿತ್ರನಟ ಶರಣ್ ಹೇಳಿದರು.
ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಸಂಸ್ಥಾನ ಜಾತ್ರಾಮಹೋತ್ಸವ ಸಾಂಸ್ಕೃತಿಕ ಸಮಾರೋಪ ಸಮಾರಂಭದ ವಿಶೇಷ ಅತಿಥಿಯಾಗಿ ಮಾತನಾಡಿದ ಅವರು, ಪಕ್ಕದ ಯಾದಗಿರಿ ಜಿಲ್ಲೆಯ ಅಮೇರಿಕನ್ ಆಸ್ಪತ್ರೆ ಎಂದು ಕರೆಯಲ್ಪಡುತ್ತಿದ್ದ ಹೋಲ್ ಸ್ಟನ್ ಆಸ್ಪತ್ರೆಯಲ್ಲಿ ನನ್ನ ಜನನವಾಗಿದ್ದು,ಈ ಭಾಗಕ್ಕೆ ಬಂದಾಗಲೆಲ್ಲ ನನ್ನ ಮನೆಗೆ ಬಂದ ಅನುಭವವಾಗುತ್ತದೆ ಎಂದರು.
ಕಲಬುರಗಿ ಶರಣನ ಆಶೀರ್ವಾದ ಫಲದಿಂದ ನಾನು ಜನ್ಮತಾಳಿರುವೆ, ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾಶಿವಯೋಗಿಯ ಕಾರುಣ್ಯದಿಂದ ಚಿತ್ರರಂಗದಲ್ಲಿ ನೆಲೆಯೂರಿರುವೆ ಎಂದರು.
ನಾಲವಾರದ ಪೂಜ್ಯರ ಆಶೀರ್ವಾದ ಪಡೆದು ನಾನು ಛೂ ಮಂತರ್ ಎಂಬ ಸಿನಿಮಾ ಪ್ರಾರಂಭಿಸಿದೆ. ಶುಭಾವಾಗಲಿ ಎಂದು ಹರಸಿ ಆಶೀರ್ವಾದ ಮಾಡಿದ್ದರು. ಅವರು ನುಡಿದಂತೆ ಸಿನಿಮಾ ಯಶಸ್ವಿಯಾಯಿತು ಎಂದರು.
ಕನ್ನಡದ ಮೇರುನಟ ದಿ.ಡಾ.ರಾಜಕುಮಾರ, ಡಾ.ಅಂಬರೀಶ್ ಅಂತಹವರು ನಾಲವಾರ ಮಠದ ಜಾತ್ರೆಗೆ ಬಂದು ಧನ್ಯತೆಯ ಭಾವ ಅನುಭವಿಸಿದ್ದರು. ಅಂತಹ ಪಾವನ ವೇದಿಕೆಯ ಮೇಲೆ ನನಗೂ ಅವಕಾಶ ಸಿಕ್ಕಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದರು.
ಉತ್ತರ ಕರ್ನಾಟಕ ಭಾಗದ ಜನರ ಅಭಿಮಾನ ಸಿಳ್ಳೆ-ಕೇಕೆಗಳೇ ಕನ್ನಡದ ಕಲಾವಿದರನ್ನು ಜೀವಂತವಾಗಿಟ್ಟಿವೆ. ನೀವು ತೋರುವ ಪ್ರೀತಿ ಬೆಲೆಕಟ್ಟಲಾಗದು ಎಂದು ಭಾವುಕರಾದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಹುಕ್ಕೇರಿ ಸಂಸ್ಥಾನದ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮಧ್ಯರಾತ್ರಿಯಾದರೂ ಅಪಾರ ಸಂಖ್ಯೆಯಲ್ಲಿ ಜನಸಾಗರ ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ನೋಡುವುದೇ ಒಂದು ಸೋಜಿಗ. ನಾಲವಾರ ಶ್ರೀಮಠದ ಭಕ್ತರಲ್ಲಿ ಕೇವಲ ಭಕ್ತಿ ಮಾತ್ರವಲ್ಲ, ಗುರುವಿನ ಮೇಲೆ ಅಪಾರವಾದ ಪ್ರೀತಿ ಇದೆ ಎಂಬುದು ಇದರಿಂದ ನೋಡಬಹುದು ಎಂದರು.
ಕಾವಿ ಧರಿಸಿದವರೆಲ್ಲಾ ಸ್ವಾಮೀಜಿಗಳಾಗುವುದಿಲ್ಲ, ಜನರ ಚಿಂತೆ ಕಳೆದವರು ನಿಜವಾದ ಸ್ವಾಮೀಜಿಗಳಾಗುತ್ತಾರೆ ಎಂದರು.
ಹಿಂದಿಯ ಇಂಡಿಯನ್ ಐಡಲ್ ಹಾಗೂ ಕನ್ನಡದ ಸರಿಗಮಪ ಕಾರ್ಯಕ್ರಮದ ಸ್ಪರ್ಧಿ ಕು.ಶಿವಾನಿ ಶಿವದಾಸ ಸ್ವಾಮಿ ಅವರ ಸಂಗೀತ ರಸಮಂಜರಿ ನೆರೆದಿದ್ದ ಜನಸ್ತೋಮವನ್ನು ಭಾವಪರವಶರನ್ನಾಗಿ ಮಾಡಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳು ನಾಡು ಸುಖ ಸಮೃದ್ಧಿಯಿಂದಿರಲಿ, ಜನ ನೆಮ್ಮದಿಯ ಬದುಕನ್ನು ನಡೆಸುವಂತೆ, ರೈತರ ಸಂಕಷ್ಟಗಳೆಲ್ಲಾ ಪರಿಹಾರವಾಗಿ, ಮಳೆ-ಬೆಳೆ ಚನ್ನಾಗಿ ಬಂದು, ಅದಕ್ಕೆ ತಕ್ಕ ಬೆಲೆ ಸಿಕ್ಕು ಎಲ್ಲರೂ ಸಂತಸದಿಂದ ಬದುಕುವ ವಾತಾವರಣ ನಿರ್ಮಾಣವಾಗಲಿ ಎಂದರು.
ಸಂಸ್ಕೃತಿಯಿಂದ ವಿಮುಖರಾಗದೆ, ಜಾತಿ ಧರ್ಮದ ಹೆಸರಲ್ಲಿ ಕಚ್ಚಾಡದೆ, ಎಲ್ಲರೊಂದಿಗೆ ಸೌಹಾರ್ದಯುತವಾಗಿ ಬಾಳುವುದನ್ನು ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.