ವಾಯುಭಾರ ಕುಸಿತ ಭಾರಿ ಮಳೆ: ರಾಜ್ಯದ 11 ಜಿಲ್ಲೆಗೆ 2 ದಿನ ಯೆಲ್ಲೋ ಅಲರ್ಟ್‌ ಘೋಷಣೆ

ಜಿಲ್ಲೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ, ಅಕ್ಟೋಬರ್ 25 ಹಾಗೂ 26 ರಂದು 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಪೂರ್ವ ಅರಬ್ಬಿ ಸಮುದ್ರದಲ್ಲಿ ಪಣಜಿಯಿಂದ 380 ಕಿ.ಮೀ ದೂರದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದೆ. ಹಾಗೆಯೇ, ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಮತ್ತೊಂದು ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಇದು ಮತ್ತಷ್ಟು ತೀವ್ರಗೊಂಡು ಅಕ್ಟೋಬರ್ 27ರಂದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರದ ವಿಜ್ಞಾನಿ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಯಾವ ಜಿಲ್ಲೆಗಳಲ್ಲಿ ಯಾವಾಗ ಮಳೆ ?

  • ಕರಾವಳಿ ಜಿಲ್ಲೆಗಳು – ಅಕ್ಟೋಬರ್ 24 ರಿಂದ 30ರ ವರೆಗೆ ವ್ಯಾಪಕವಾಗಿ ಮಳೆಯಾಗುವ ಸಂಭವವಿದೆ.
  • ಉತ್ತರ ಮತ್ತು ದಕ್ಷಿಣ ಒಳನಾಡು – ಅಕ್ಟೋಬರ್ 24 ರಿಂದ 28ರ ವರೆಗೆ ಹಲವು ಕಡೆಗಳಲ್ಲಿ ಭಾರಿ ಮಳೆಯಾಗಲಿದೆ. ಅಕ್ಟೋಬರ್ 29 ಮತ್ತು 30ರಂದು ಕೆಲವು ಕಡೆಗಳಲ್ಲಿ ಮಾತ್ರ ಮಳೆಯಾಗುವ ಸಾಧ್ಯತೆಯಿದೆ.
  • ಬೆಂಗಳೂರು – ಅಕ್ಟೋಬರ್ 24 ರಿಂದ 28ರ ವರೆಗೆ ಮಳೆಯಾಗುವ ಸಾಧ್ಯತೆಯಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ?

  • ಅಕ್ಟೋಬರ್ 25 ಮತ್ತು 26 ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
  • ಅಕ್ಟೋಬರ್ 27 ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ತುಮಕೂರು, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು ಯೆಲ್ಲೋ ಅಲರ್ಟ್ ನೀಡಲಾಗಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮ ವಹಿಸಲು ಸೂಚಿಸಿದೆ. ಕೃಷಿಕರು ಮಳೆ, ಸಿಡಿಲಿನಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಯಿಂದ ದೂರವಿರಬೇಕು. ಸಾರ್ವಜನಿಕರು, ಮಕ್ಕಳು, ಕಾರ್ಮಿಕರು ಸಿಡಿಲು ಬಡಿಯುವ ಸಂದರ್ಭದಲ್ಲಿ ಹೊರಗೆ ತಿರುಗಾಡಬಾರದು. ಸೂಕ್ತ ಕಟ್ಟಡದಲ್ಲಿಆಶ್ರಯ ಪಡೆಯಬೇಕು. ಕಟ್ಟಡಗಳ ಮೇಲೆ ಅಪಾಯಕಾರಿ ರೆಂಬೆ-ಕೊಂಬೆಗಳಿದ್ದಲ್ಲಿ ಮೊದಲೇ ಕತ್ತರಿಸಿ ಕಟ್ಟಡಗಳನ್ನು ರಕ್ಷಿಸಿಕೊಳ್ಳಬೇಕು. ಮಕ್ಕಳು ಸೇರಿದಂತೆ ಸಾರ್ವಜನಿಕರು ಅಪಾಯಕಾರಿ ಮರ, ವಿದ್ಯುತ್‌ ಕಂಬದ ಹತ್ತಿರ ಮಳೆಯ ಸಂದರ್ಭದಲ್ಲಿಹೋಗಬಾರದು. ತುಂಡಾದ ವಿದ್ಯುತ್‌ ತಂತಿಗಳಿಂದ ದೂರವಿರುವುದು. ಮರಗಳ ಕೆಳಗೆ ನಿಲ್ಲಬಾರದು. ಮಳೆಯಿಂದಾಗಿ ಯಾವುದೆ ಪ್ರದೇಶದಲ್ಲಿ ಮರಗಳು ಬಿದ್ದಲ್ಲಿ ಅರಣ್ಯ ಇಲಾಖೆಯ ಸಹಾಯವಾಣಿ ಸಂಖ್ಯೆ 1926 ಕರೆ ಮಾಡಿ ತಿಳಿಸಬೇಕು.

ಕಳೆದ 24 ಗಂಟೆಗಳಲ್ಲಿ ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಿದ್ದು, ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮಳೆ ದಾಖಲಾಗಿದೆ. ಪ್ರಮುಖವಾಗಿ, ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ 10 ಸೆಂ.ಮೀ, ಬಾಗಲಕೋಟೆ ಜಿಲ್ಲೆಯ ಕೆರೂರಿನಲ್ಲಿ 8 ಸೆಂ.ಮೀ, ಕೊಪ್ಪಳ ಜಿಲ್ಲೆಯ ತಾವರಗೇರೆಯಲ್ಲಿ 7 ಸೆಂ.ಮೀ ಹಾಗೂ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ.

Leave a Reply

Your email address will not be published. Required fields are marked *