ಚಿತ್ತಾಪುರ: ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರು ಅವರು ದಿ.ವಿಠಲ್ ಹೇರೂರ ಅವರ ಹೋರಾಟದ ಸಮಯದಿಂದ ಇಂದಿನವರೆಗೂ ಕೋಲಿ ಸಮಾಜದಲ್ಲಿ ಒಡಕುಂಟು ಮಾಡುವದು ಮುಂದುವರೆಸಿದ್ದಾರೆ. ಅದು ಅವರ ಪ್ರವೃತ್ತಿಯಾಗಿದೆ ಎಂದು ಕೋಲಿ ಸಮಾಜದ ಮುಖಂಡ ಮುನಿಯಪ್ಪ ಎಸ್ ಕೊಳ್ಳಿ ದಂಡೋತಿ ಹೇಳಿದ್ದಾರೆ.
ಹೇರೂರ ಅವರು ಬದುಕಿರುವವರೆಗೂ ಅವರನ್ನು ವಿರೋಧ ಮಾಡುತ್ತಲೇ ಬಂದಿದ್ದಾರೆ. ಹೇರೂರ ಅವರು ಸಮಾಜದ ಒಳಿತಿಗಾಗಿ ಯಾವುದೆ ಸಭೆ, ಸಮಾರಂಭ, ಕಾರ್ಯಕ್ರಮ, ಪ್ರತಿಭಟನೆ, ಹೋರಾಟ ಹಮ್ಮಿಕೊಂಡರೆ ಆಗ ಕಮಕನೂರು ಅವರು ಪರ್ಯಾಯವಾಗಿ ಕಾರ್ಯಕ್ರಮ ಮಾಡುವ ಮೂಲಕ ಸಮಾಜದ ಜನರು ಒಗ್ಗಟ್ಟಿನಿಂದ ಇರದಂತೆ ಮಾಡಿರುವುದು ಸಮಾಜದ ಜನರಿಗೆ ತಿಳಿದಿದೆ ಎಂದರು.
ಕಲಬುರಗಿ ನಗರದಲ್ಲಿದ್ದ ಸಮಾಜದಲ್ಲಿ ಒಡಕ್ಕುಂಟು ಮಾಡುವ ಪ್ರವೃತ್ತಿ ಜಿಲ್ಲೆಯಾದ್ಯಂತ ಮುಂದುವರೆಸಿದ್ದಾರೆ. ತಮ್ಮ ರಾಜಕೀಯ ಸ್ವಾರ್ಥಕ್ಕೆ ಚಿತ್ತಾಪೂರದಲ್ಲಿನ ಸಮಾಜದ ಸಂಘಟನೆ ಒಡೆಯುವ ಸಂಚು ಮಾಡಿ ಎರಡು ಬಣಗಳಾಗಿ ಸಮಾಜದಲ್ಲಿ ಒಡಕು ಮೂಡಿಸಿದ್ದಾರೆ. ಅದಕ್ಕೆ ಸಾಕ್ಷಿಯೆಂಬಂತೆ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಸಮಾರಂಭದಲ್ಲಿ ತನ್ನದೆ ಬಣದ ಗುಂಪಿನೊಂದಿಗೆ ಚಿತ್ತಾಪೂರಕ್ಕೆ ಆಗಮಿಸಿದ್ದಾರೆ. ಅವರಿಗೆ ಧೈರ್ಯವಿದ್ದರೆ ಸಮಾಜದಲ್ಲಿ ಒಡಕ್ಕುಂಟು ಮಾಡಿಲ್ಲ ಎಂದು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕುತ್ತೆವೆ ಎಂದರು.
ತಾಲೂಕು ಕೋಲಿ ಸಮಾಜದ ಅಧ್ಯಕ್ಷರ ಆಯ್ಕೆ ಮಾಡುವಾಗ ನಿಂಗಣ್ಣಾ ಮತ್ತು ಶಿವಕುಮಾರ ಅವರಿಗೆ ತಲಾ ಹದಿನೆಂಟು ತಿಂಗಳು ಎಂದು ಸಮಾನ ಅವಕಾಶ ನೀಡಲಾಗಿತ್ತು. ಅದರ ಅರಿವಿದ್ದರೂ ಸಮಾಜ ಒಡೆಯುವ ಹುನ್ನಾರ ಮಾಡಿ ಶಿವಕುಮಾರ ಅವರನ್ನು ತನ್ನ ಗುಂಪಿನ ಅದ್ಯಕ್ಷರಾಗಿ ಮಾಡಿ ಸಮಾಜಕ್ಕೆ ಮಾಡಿದ ದ್ರೋಹದ ಕೆಲಸ ಎಂಬುದು ಇಡೀ ಸಮಾಜಕ್ಕೆ ಗೊತ್ತಾಗಿದೆ. ಸರ್ಕಾರದ ಭಾಗವಾಗಿರುವ ಅವರು ಸರ್ಕಾರದ ಲಾಂಛನ ಇರುವ ಲೆಟರ್ ಯಾವ ಕೆಲಸಕ್ಕೆ, ಎಂತಹ ವ್ಯಕ್ತಿಗೆ ನೀಡಬೇಕು ಎಂಬ ಅರಿವಿಲ್ಲದೆ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದರು.