ಬೆಂಗಳೂರು: ತಾಲೂಕು ಕಚೇರಿಯಲ್ಲಿರುವ ಪ್ರಮುಖ ಭೂದಾಖಲೆಗಳನ್ನು ಗಣಕೀಕರಣಗೊಳಿಸುವ ‘ಭೂ ಸುರಕ್ಷತಾ ಯೋಜನೆ’ಯ ಎರಡನೇ ಹಂತಕ್ಕೆ ಇದೆ ಜನವರಿಯಿಂದ ಚಾಲನೆ ನೀಡಲಾಗುವದು ಎಂದು ಕಂದಾಯ ಇಲಾಖೆ ಹೇಳಿದೆ.
ತಾಲೂಕು ಕಚೇರಿಗಳಲ್ಲಿ ಸಂಗ್ರಹವಾಗಿರುವ ಅತ್ಯಂತ ಪ್ರಮುಖವಾದ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಹಳೆಯ ಭೂದಾಖಲೆಗಳನ್ನು ಗಣಕೀಕರಣಗೊಳಿಸುವ ಕಾರ್ಯಕ್ಕೆ ಕಳೆದ ವರ್ಷ ಚಾಲನೆ ನೀಡಲಾಗಿತ್ತು.
ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ತಲಾ ಒಂದು ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಹಮ್ಮಿಕೊಂಡಿರುವ ಈ ಕಾರ್ಯದಲ್ಲಿ ಇದುವರೆಗೂ 7.95 ಕೋಟಿ ಪುಟಗಳನ್ನು ಒಳಗೊಂಡ 14.87 ಲಕ್ಷ ಕಡತಗಳನ್ನು ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡಲಾಗಿದೆ.
ಎರಡನೇ ಹಂತದಲ್ಲಿ 209 ತಾಲೂಕುಗಳಲ್ಲಿ ಏಕಕಾಲಕ್ಕೆ ‘ಭೂ ಸುರಕ್ಷಾ ಯೋಜನೆ’ಗೆ ಚಾಲನೆ ನೀಡಲಾಗುತ್ತಿದೆ. ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಒದಗಿಸಿವೆ. ಈಗಾಗಲೇ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
ಹಳೆಯ ಶಿಥಿಲಗೊಂಡ ದಾಖಲೆಗಳನ್ನು ಶಾಶ್ವತವಾಗಿ ಡಿಜಿಟಲ್ ರೂಪದಲ್ಲಿ ಉಳಿಸಿಕೊಳ್ಳಲು, ನಕಲಿ ದಾಖಲೆಗಳ ಹಾವಳಿ ತಡೆಯಲು, ಸಾರ್ವಜನಿಕರ ಅನಗತ್ಯ ಅಲೆದಾಟ ತಪ್ಪಿಸಲು ಮತ್ತು ಅಂತಹ ಮೂಲ ದಾಖಲೆಗಳು ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ದೊರೆಯುವಂತೆ ಮಾಡಲು ಭೂ ಸುರಕ್ಷಾ ಯೋಜನೆ ಅನುಕೂಲ ಮಾಡಿಕೊಡುತ್ತದೆ ಎಂದು ಕಂದಾಯ ಇಲಾಖೆ ಪ್ರಕಟಣೆ ಹೇಳಿದೆ.