ತೊಟ್ನಳ್ಳಿ: ದುರ್ಗಾದೇವಿ ಜಾತ್ರಾ ಮಹೋತ್ಸವದ ಕರಪತ್ರ ಬಿಡುಗಡೆ

ತಾಲೂಕು

ಸೇಡಂ: ತಾಲೂಕಿನ ತೊಟ್ನಳ್ಳಿ ಗ್ರಾಮದಲ್ಲಿ ಜ.12, 13 ರಂದು ದುರ್ಗಾದೇವಿ ಜಾತ್ರಾ ಮಹೋತ್ಸವ ಜರುಗುವದು. ಪ್ರಯುಕ್ತ ತೊಟ್ನಳ್ಳಿ ಗ್ರಾಮದ ಮಹಾಂತೇಶ್ವರ ಮಠದ ಡಾ. ತ್ರಿಮೂರ್ತಿ ಶಿವಾಚಾರ್ಯರು ಮತ್ತು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಕರಪತ್ರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ತೊಟ್ನಳ್ಳಿ ಗ್ರಾಮದ ಕಲಾವಿದರು ಹಾಗೂ ಪತ್ರಿಕಾ ಸೇವೆ ದಾಸೋಹಿ ವಿಶ್ವನಾಥ ತೊಟ್ನಳ್ಳಿ, ಚಂದ್ರಕಾಂತ ಮುದಕನಳ್ಳಿ, ತೋಟಪ್ಪ ಪೂಜಾರಿ, ಹಣಮಂತ ಹಡಪದ, ರವಿರಾಜ ಹುಣಚಿಹಳ್ಳಿ, ದೇವಿಂದ್ರಪ್ಪ ಹುಳಗೇರಿ, ಉಮೇಶ ಮಠಪತಿ, ವೀರಭದ್ರಪ್ಪ ಹಣಚಿಹಳ್ಳಿ, ಶಿವರಾಜ ಅಣೆಪ್ಪಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜಾತ್ರಾ ಮಹೋತ್ಸವದ ಮಾಹಿತಿ

ಜ.12ರಂದು ಸಂಜೆ 5 ಗಂಟೆಗೆ ಮಹಾಂತೇಶ್ವರ ಮಠದಿಂದ ದೇವಿಯ ದೇವಸ್ಥಾನದವರೆಗೆ ದುರ್ಗಾದೇವಿ ಉತ್ಸವ ಮೂರ್ತಿಯನ್ನು ಬರಮಾಡಿಕೊಳ್ಳುವುದು. ರಾತ್ರಿ 8.30 ಗಂಟೆಗೆ ಮೀನಹಾಬಾಳ, ಮಂಗಲಗಿ, ಬಿಜನಳ್ಳಿ, ಸಂಗಾವಿ (ಎಸ್), ಬೀರನಳ್ಳಿ, ಕುಕ್ಕುಂದಾ, ಯಡಗಾ, ಬಿಬ್ಬಳ್ಳಿ, ನೀಲಹಳ್ಳಿ, ಮಳಖೇಡ, ಮಲಕೂಡ, ತೊನಸನಳ್ಳಿ(ಟಿ), ಟೆಂಗಳಿ, ಸಾಲಹಳ್ಳಿ, ಕೊಡದೂರ ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮ ನೆರವೇರುವುದು.

ಜ. 13ರಂದು ಬೆಳಿಗ್ಗೆ ಮಲ್ಲಿಕಾರ್ಜುನ ಸ್ವಾಮಿ ದುರ್ಗಾದೇವಿ ರುದ್ರಾಭಿಷೇಕ ನಡೆಯುವದು, ನಂತರ ಕನ್ಯೆ ಮುತ್ತೈದೆಯವರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವುದು,

ನುರಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗುವದು. ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಮಧ್ಯಾಹ್ನ 2 ಗಂಟೆಗೆ ಸಕಲ ವಾದ್ಯಗಳೊಂದಿಗೆ ಪಲ್ಲಕ್ಕಿ ಉತ್ಸವ ಜರುಗುವದು. ಈ ಸಂದರ್ಭದಲ್ಲಿ ಸೇಡ ಶಿವಶಂಕರ ಮಠದ ಶಿವಶಂಕರ ಶಿವಾಚಾರ್ಯರು, ಟೆಂಗಳಿ – ಮಂಗಲಗಿಯ ಡಾ. ಶಾಂತಸೋಮನಾಥ ಶಿವಾಚಾರ್ಯರು, ಮಳಖೇಡದ ಅಭಿನವ ಕಾರ್ತೀಕೇಶ್ವರ ಶಿವಾಚಾರ್ಯರು ಮತ್ತು ಕೊಟ್ಟೂರೇಶ್ವರ ಶಿವಾಚಾರ್ಯರು, ಸೇಡಂ ಕೊತ್ತಲ ಬಸವೇಶ್ವರದ ಸದಾಶಿವ ಮಹಾಸ್ವಾಮಿಗಳು, ಹಾಲಪಯ್ಯ ವೀರಕ್ತ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು, ಯಡಗಾದ ಸಿದ್ದಪ್ಪ ಮುತ್ಯಾ, ಕರದಾಳದ ತೋಟಯ್ಯ ಶಾಸ್ತ್ರಿಗಳ ನೇತ್ರತ್ವದಲ್ಲಿ ತೊಟ್ನಳ್ಳಿಯ ಮಹಾಂತೇಶ್ವರ ಮಠದ ಡಾ. ತ್ರಿಮೂರ್ತಿ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಪಲ್ಲಕ್ಕಿ ಉತ್ಸವ ಜರುಗುವುದು.

ರಾತ್ರಿ 9.30ಕ್ಕೆ ರಾಚಯ್ಯಸ್ವಾಮಿ ಖಾನಾಪೂರ ಅವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಹಾಗೂ ನಂದಿತಾ ಮೆಲೋಡಿಸ್ ತಂಡದಿಂದ ಜನಪದ ಸಂಗೀತ ಕಾರ್ಯಕ್ರಮ ಜರುಗುವುದು.

ಸದರಿ ಕಾರ್ಯಕ್ರಮಗಳಿಗೆ ಭಕ್ತರು ಆಗಮಿಸಿ ದುರ್ಗಾದೇವಿಯ ದರ್ಶನ ಪಡೆದು ಪ್ರಸಾದ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *