ಸುದ್ದಿ ಸಂಗ್ರಹ

ತಹಸೀಲ್ದಾರ್ ನಾಗಯ್ಯ ಹಿರೇಮಠ ಚಾಲನೆ | ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವಕ್ಕೆ ಹರಿದು ಬಂದ ಭಕ್ತಸಾಗರ

ಚಿತ್ತಾಪುರ: ಐತಿಹಾಸಿಕ ನಾಗಾವಿ ಕ್ಷೇತ್ರದಲ್ಲಿರುವ ಶಕ್ತಿ ದೇವತೆ ಯಲ್ಲಮ್ಮ ದೇವಿಯ ಜಾತ್ರೆಯು ಭಕ್ತದ ಸಡಗರ, ಸಂಭ್ರಮದ ಮಧ್ಯೆ ಜರುಗಿತು, ಪಲ್ಲಕ್ಕಿ ಉತ್ಸವದ ಸಂಭ್ರಮ ಕಣ್ಣುಂಬಿಕೊಳ್ಳಲು ಭಕ್ತ ಸಾಗರವೇ ನಾಗಾವಿ ಕ್ಷೇತ್ರಕ್ಕೆ ಹರಿದು ಬರುವ ಮೂಲಕ ದೇವಿಯ ದರ್ಶನ ಭಾಗ್ಯ ಪಡೆದು ಪುನಿತರಾದರು.

ಪಟ್ಟಣದ ಬ್ರಾಹ್ಮಣ ಸಮಾಜದ ಸರಾಫ್ ಲಚ್ಚಪ್ಪ ನಾಯಕ ಅವರ ಮನೆಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರ ಉಪಸ್ಥಿತಿಯಲ್ಲಿ ಸೋಮವಾರ ಮಧ್ಯಾಹ್ನ ವಿಶ್ವೇಶ್ವರ ಪೂಜೆ, ಗುರುಪೂಜೆ, ದೇವಿಯ ಪಲ್ಲಕ್ಕಿ ಪೂಜೆ ಜರುಗಿತು, ನಂತರ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ತಹಸೀಲ್ದಾರ್ ಅವರು ಮಂಗಳಾರತಿ ಮಾಡಿ ಪಲ್ಲಕ್ಕಿ ಹೊತ್ತುಕೊಂಡು ಉತ್ಸವದ ಮೆರವಣಿಗೆಗೆ ಚಾಲನೆ ನೀಡಿದರು.

ನೆರೆಯ ಮಹಾರಾಷ್ಟ್ರ, ಆಂದ್ರಪ್ರದೇಶ, ತೇಲಂಗಾಣ ಸೇರಿದಂತೆ ವಿವಿಧ ಪ್ರದೇಶಗಳಿಂದ ಭಕ್ತರ ಮಹಾಪೂರವೇ ಹರಿದು ಬಂದಿತ್ತು. ಭಾನುವಾರವೇ ಆಗಮಿಸಿದ್ದ ಭಕ್ತಸಮೂಹ ದೇವಸ್ಥಾನದ ಎದುರಿಗೆ ಇರುವ ಎರಡು ಬಾವಿಗಳಲ್ಲಿ ಮತ್ತು ಹಿಂದುಗಡೆ ಇರುವ ನಂದಿಬಾವಿಯಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ಷರು, ದೇವಿಯ ನಾಮಸ್ಮರಣೆಯೊಂದಿಗೆ ಯಲ್ಲಮ್ಮ ದೇವಸ್ಥಾನಕ್ಕೆ ಹೆಜ್ಜೆ ಹಾಕಿದರು. ಹೋಳಿಗೆ, ಕಡಬು, ಪಡೆ, ಕರ್ಚೆಕಾಯಿ ಮತ್ತಿತರ ಖಾದ್ಯಗಳನ್ನು ತಯಾರಿಸಿ ದೇವಿಗೆ ನೈವೇದ್ಯ ಅರ್ಪಿಸಿ ಧನ್ಯರಾದರು.

ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಎಸ್.ಸಿ.ಪಾಟೀಲ, ಪಿಎಸ್‌ಐ ಮಂಜುನಾಥ ರೆಡ್ಡಿ, ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಗದೀಶ್ ಚವ್ಹಾಣ, ಅಬಕಾರಿ ನಿರೀಕ್ಷಕಿ ವನೀತಾ ಸೀತಾಳೆ, ಪ್ರಮುಖರಾದ ಚಂದ್ರಶೇಖರ ಅವಂಟಿ, ರವೀಂದ್ರ ಸಜ್ಜನಶೆಟ್ಟಿ, ಬಸವರಾಜ ಬೆಣ್ಣೂರಕರ್, ವಿನಾಯಕರಾವ್ ನಾಯಕ, ರತ್ನಾಕರ್ ನಾಯಕ, ಗೌತಮ್ ನಾಯಕ, ಕಣ್ಣಾ ನಾಯಕ, ನಾಗರೆಡ್ಡಿ ಗೋಪಸೇನ್, ಶಿವರೆಡ್ಡಿಗೌಡ ಪಾಲಪ್ಪ, ಈರಪ್ಪ ಭೋವಿ, ಭೀಮಸಿಂಗ್ ಚವ್ಹಾಣ, ನಾಗರಾಜ ರೇಷ್ಮೆ ಗಿರೀಶ್ ಜಾನಿಬ್, ಚಂದ್ರಶೇಖರ ಉಟಗೂರ, ಅಂಬಾದಾಸ್ ತುರೆ, ನಾಗರಾಜ ರೆಡ್ಡಿ, ಸುರೇಶ್ ಅಳ್ಳೋಳ್ಳಿ ಸೇರಿದಂತೆ ಇತರರು ಇದ್ದರು.

ದೇವಿಯ ಪಲ್ಲಕ್ಕಿ ಮೆರವಣಿಗೆಯು ಲಚ್ಚಪ್ಪ ನಾಯಕ್ ಅವರ ಮನೆಯಿಂದ ಸಕಲ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ದೇವಿಯ ಮಂದಿರವರೆಗೆ ಭಕ್ತರ ಜಯಘೋಷಗಳೊಂದಿಗೆ ಸಡಗರ, ಸಂಭ್ರಮದಿಂದ ತಲುಪಿತು.
ಮೆರವಣಿಗೆಯಲ್ಲಿ ಡಿಜೆಗಳ ಸೌಂಡ್ ಗೆ ಯುವಕರು
ಕುಣಿದು ಕುಪ್ಪಳಿಸಿದರು. ಡೊಳ್ಳು ಹಲಗೆ ವಾದನ,
ಯುವಕರ ನೃತ್ಯ ಹಾಗೂ ಸಾಂಸ್ಕೃತಿಕ ಕಲಾ
ತಂಡಗಳು ಎಲ್ಲರ ಕಣಮನ ಸೆಳೆಯಿತು.

ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಜನರು ಪಲ್ಲಕ್ಕಿಯಲ್ಲಿ ಆರೂಢಳಾದ ದೇವಿಯ ಮೂರ್ತಿಗೆ ಹೂವು ಚೆಲ್ಲಿ ನಮಿಸಿದರು. ಜಾತ್ರೆಯಲ್ಲಿ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಅಧಿಕಾರಿಗಳು ಬಿಗಿ ಬಂದೋಬಸ್ತ್ ಮಾಡಿದ್ದರು. ದೇವಿಯ ಜಾತ್ರೆ ಪಲ್ಲಕ್ಕಿ ಉತ್ಸವ ಮೆರವಣಿಗೆ ಸಂಪೂರ್ಣ ಶಾಂತಿಯುತವಾಗಿ ಸಂಪನ್ನವಾಯಿತು. ಯುವಕರು ಆಸಕ್ತಿ ವಹಿಸಿ ದಾರಿಯುದ್ದಕ್ಕೂ ದೀಪಾಲಂಕಾರ ಮಾಡಿರುವುದು ಜಾತ್ರೆಗೆ ಮತ್ತಷ್ಟು ಮೆರಗು ನೀಡಿತು. ಭೋವಿ ಸಮಾಜದವರು ಪಲ್ಲಕ್ಕಿ ಸೇವೆ ಸಲ್ಲಿಸಿದರು. ದೇವಸ್ಥಾನದ ಮಾರ್ಗದ ಉದ್ದಕ್ಕೂ ಭಕ್ತಸಮೂಹ ಪ್ರಸಾದ ಸೇವೆ, ಕುಡಿವ ನೀರು, ಹೆಣ್ಣು ಹಂಪಲು ವಿತರಣೆ ಮಾಡುವ ಭಕ್ತಾದಿಗಳ ಸೇವೆ ನಿರಂತರವಾಗಿ ನಡೆಯಿತು.

ಈ ಬಾರಿ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ
ಸೇರಿರುವುದು ದಾಖಲೆಯಾಗಿದೆ, ಪಟ್ಟಣದ
ಪ್ರತಿಯೊಂದು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು,
ಬಸ್ ನಿಲ್ದಾಣದಿಂದ ದೇವಸ್ಥಾನದವರೆಗೆ
ಕಾಲ್ನಡಿಗೆಯಲ್ಲಿ ಭಕ್ತರು ಹೋಗುತ್ತಿರುವ ದೃಶ್ಯ
ಕಂಡುಬಂತು. ಇಷ್ಟಾದರೂ ಯಾವುದೇ ಅಹಿತಕರ
ಘಟನೆಗೆ ಆಸ್ಪದ ನೀಡದೆ ಹಾಗೂ ಸುಗಮ
ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಂಡ ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಭಕ್ತಾದಿಗಳು, ಪಟ್ಟಣದ ಅನೇಕ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *