ಭರತನೂರ ಗುರುನಂಜೇಶ್ವರರ ಅದ್ಧೂರಿ ಜಾತ್ರಾ ಮಹೋತ್ಸವ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಾಳಗಿ
ತಾಲೂಕಿನ ಭರತನೂರ ಗ್ರಾಮದ ವಿರಕ್ತ ಮಠದ ಕರ್ತೃ ಗುರುನಂಜೇಶ್ವರರ ಜಾತ್ರಾ ಮಹೋತ್ಸವ ಗುರುವಾರ ಅದ್ದೂರಿಯಾಗಿ ಜರುಗಿತು.

ಶ್ರೀಮಠದ ಪೀಠಾಧಿಪತಿ ಚಿಕ್ಕಗುರುನಂಜೇಶ್ವರ ಸ್ವಾಮಿಜಿ ನೇತೃತ್ವದಲ್ಲಿ ವಿವಿಧೆಡೆಯ ಅಪಾರ ಭಕ್ತರು ರಾತ್ರಿ ವೇಳೆ ತೇರು ಎಳೆದು ಭಕ್ತಿಭಾವ ಮೆರೆದರು. ಹಲಗೆ, ಡೊಳ್ಳು, ಭಾಜಾ–ಭಜಂತ್ರಿ ವಾದ್ಯ ಮೇಳದೊಂದಿಗೆ ಆಗಮಿಸಿದ ಪುರವಂತರು, ಭಕ್ತರು ಕುಂಭ–ಕಳಸ, ಮಿಣಿ ಮೆರವಣಿಗೆ ಜೊತೆಗೆ ರಥಕ್ಕೆ ಪ್ರದಕ್ಷಿಣೆ ಹಾಕಿದರು.

ಪುರವಂತರ ಕುಣಿತ ಮುಗಿಯುತ್ತಿದ್ದಂತೆ ಜಯಘೋಷ ಸಹಿತ ಪಟಾಕಿಗಳ ಆಕರ್ಷಕ ಚಿತ್ತಾರ ಮೊಳಗಿತು. ಭಕ್ತರು ಉತ್ತತ್ತಿ-ನಾರು, ಫಲ-ಪುಷ್ಪ ತೇರಿನ ಮೇಲೆ ತೂರಿ ಕೈಮುಗಿದು ನಮಿಸಿ ಧನ್ಯರಾದರು.

ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಪೂಜೆ, ಮಹಾಮಂಗಳಾರತಿ, ಮಹಿಳೆಯರಿಂದ 108 ಕುಂಬಾಭಿಷೇಕ ಮತ್ತು ಶಿವಶರಣೆ ಶಿವಬಸಮ್ಮ ತಾಯಿಗೆ ಮಹಾಪೂಜೆ ನೆರವೇರಿತು.

ವಿವಿಧೆಡೆಯಿಂದ ಆಗಮಿಸಿದ ಅಪಾರ ಭಕ್ತರು ಗುರುನಂಜೇಶ್ವರರ ಗದ್ದುಗೆಗಳಿಗೆ ಕಾಯಿ-ಕರ್ಪೂರ, ಫಲ-ಪುಷ್ಪ ಸಲ್ಲಿಸಿ ಹಣೆವೊಡ್ಡಿ ದರ್ಶನ ಪಡೆದರು. ಆಬಳಿಕ ಪ್ರಸಾದ ಸ್ವೀಕರಿಸಿದರು.

ಹುಲಸೂರಿನ ಶಿವಾನಂದ ಸ್ವಾಮಿಜಿ, ಹೊಸಳ್ಳಿಯ ಸಿದ್ದಲಿಂಗ ಶಿವಾಚಾರ್ಯರು, ಡೊಣ್ಣೂರಿನ ವೀರಭದ್ರಪ್ಪ ಅಜ್ಜ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಜಿ.ಪಂ ಮಾಜಿ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ, ಶಿವಶರಣಪ್ಪ ಚೆನ್ನೂರ, ಪ್ರಕಾಶರೆಡ್ಡಿ ರಾಜಾಪುರ, ಶರಣಗೌಡ ಪಾಟೀಲ, ಮಲ್ಲು ಬೆಡಸೂರ ಸೇರಿದಂತೆ ಅನೇಕರು ಇದ್ದರು.

ಕಾಳಗಿ ಪೊಲೀಸರು ಬಂದೋಬಸ್ತ್ ಕಲ್ಪಿಸಿದರು.

Leave a Reply

Your email address will not be published. Required fields are marked *