ಸುದ್ದಿ ಸಂಗ್ರಹ ವಾಡಿ
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಸೂಕ್ತ ಚಿಕಿತ್ಸೆ ಸಿಗದೆ, ಮೂಲಭೂತ ಸೌಕರ್ಯಗಳ ಕೊರತೆಯಿಂದ ರೋಗಿಗಳ ಪರದಾಟ, ಸಿಬ್ಬಂದಿಯ ಜವಾಬ್ದಾರಿ ರಹಿತ ವರ್ತನೆ ಖಂಡಿಸಿ ಬಿಜೆಪಿ ಸ್ಥಳೀಯ ಅಧ್ಯಕ್ಷ ವೀರಣ್ಣ ಯಾರಿ ಆವರು ಸಮುದಾಯ ಕೇಂದ್ರದ ದ್ವಿತೀಯ ದರ್ಜೆ ಸಹಾಯಕ ಸೂರ್ಯಕಾಂತ ಹೇರೂರ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ಚಿಕಿತ್ಸೆಗೆ ಆಗಮಿಸುವ ಬಡ ಹಾಗೂ ಗ್ರಾಮೀಣ ಭಾಗದ ರೋಗಿಗಳೊಂದಿಗೆ ವೈದ್ಯಕೀಯ ಮತ್ತು ಆಡಳಿತ ಮಂಡಳಿಯ ಸಿಬ್ಬಂದಿಯ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ.
ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ ರೋಗಿಗಳನ್ನು ನಿರ್ಲಕ್ಷಿಸುವುದು ಮತ್ತು ತುರ್ತು ಸಂದರ್ಭಗಳಲ್ಲಿ ಕಾಲಹರಣ ಮಾಡುವುದು ಇಲ್ಲಿ ಸರ್ವೆ ಸಾಮಾನ್ಯವಾಗಿದೆ. ಮೂಲೆಗುಂಪಾದ ವೈದ್ಯಕೀಯ ಉಪಕರಣಗಳು
ಆಸ್ಪತ್ರೆಯಲ್ಲಿರುವ ಅನೇಕ ಲಕ್ಷಾಂತರ ರೂ ಮೌಲ್ಯದ ವೈದ್ಯಕೀಯ ಉಪಕರಣಗಳು ಸೂಕ್ತ ನಿರ್ವಹಣೆ ಇಲ್ಲದೆ ಮತ್ತು ಸಣ್ಣಪುಟ್ಟ ತಾಂತ್ರಿಕ ದೋಷಗಳಿಂದ ಮೂಲೆಗುಂಪಾಗಿವೆ. ಇದರಿಂದ ಅಪಘಾತ ಹಾಗೂ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ತುರ್ತು ಚಿಕಿತ್ಸೆ ಸಿಗದ ಕಾರಣ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿಗಳು ತಕ್ಷಣವೇ ವಾಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತನಿಖೆ ನಡೆಸಬೇಕು. ಆಸ್ಪತ್ರೆಯಲ್ಲಿನ
ಕರ್ತವ್ಯಲೋಪ ಮತ್ತು ಮೂಲಭೂತ ಸೌಕರ್ಯಗಳು ಸರಿಪಡಿಸಬೇಕು. ಇಲ್ಲವಾದಲ್ಲಿ ರೋಗಿಗಳ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಒಂದು ವಾರದೊಳಗೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮುಖಂಡರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಸ್ಥಳೀಯ ಮುಖಂಡರಾದ ಪ್ರಕಾಶ ಪೂಜಾರಿ, ರಾಜು ಶಾಲಿ, ಮಲ್ಲಿಕಾರ್ಜುನ ಸಾತಖೇಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.