ಸಂಕಷ್ಟದ ಕಾಲದಲ್ಲಿ ಹನುಮಾನ್‌ ಚಾಲೀಸಾ ಪಠಿಸಿದೆ: ಮೋದಿ ಜೊತೆ ಮಾತನಾಡುತ್ತಾ ಸ್ಮಿತ್ ಭಾವುಕ

ನವದೆಹಲಿ

ಸುದ್ದಿ ಸಂಗ್ರಹ ನವದೆಹಲಿ
ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಫ್ಲೈಟ್ ದುಬೈ ವಿಮಾನದಲ್ಲಿದ್ದ 180 ಪ್ರಯಾಣಿಕರ ಜೀವ ಉಳಿಸಿದ ಹೀರೋ ಭಾರತೀಯ ಪೈಲಟ್‌ ಜೊತೆ ಪ್ರಧಾನಿ ಮೋದಿ ಅವರು ವಿಡಿಯೋ ಕರೆ ಮಾಡಿ ಮಾತನಾಡಿಸಿದರು. ಕಠಿಣ ಪರಿಸ್ಥಿತಿಯಲ್ಲಿ ಪೈಲಟ್‌ ತೋರಿದ ಧೈರ್ಯವನ್ನು ಪ್ರಧಾನಿ ಕೊಂಡಾಡಿದರು. ಶೀಘ್ರವೇ ಗುಣಮುಖರಾಗಲೆಂದು ಹಾರೈಸಿದರು.

ಪ್ರಧಾನಿ ಮೋದಿ ಜೊತೆ ಮಾತನಾಡುತ್ತ ಭಾರತೀಯ ಪೈಲಟ್‌ ಸ್ಮಿತ್‌ ಮಚ್ಚಾರ್‌ ಭಾವುಕರಾದರು. ‘ನಿಮ್ಮ ಜೊತೆ ಮಾತನಾಡಲು ಅವಕಾಶ ಸಿಗುತ್ತದೆ ಅಂದ್ಕೊಂಡಿರಲಿಲ್ಲ. ನನಗೆ ಅತ್ಯುತ್ತಮ ಚಿಕಿತ್ಸೆ ಲಭಿಸಿದೆ’ ಎಂದು ಆರೋಗ್ಯ ವಿಚಾರಿಸಿದ ಪ್ರಧಾನಿಗೆ ಪೈಲಟ್‌ ಕೃತಜ್ಞತೆ ಸಲ್ಲಿಸಿದರು.

ಘಟನೆ ಕುರಿತು ಪ್ರಧಾನಿ ಜೊತೆ ಮಾತನಾಡಿದ ಪೈಲಟ್‌, ಸಂಕಷ್ಟದ ಕಾಲದಲ್ಲಿ ನಾನು ಹನುಮಾನ್ ಚಾಲೀಸಾ ಪಠಿಸಿದೆ. ಭಗವಾನ್ ಹನುಮಂತ ನನಗೆ ಧೈರ್ಯ ನೀಡಿದನು ಎಂದು ಹೇಳಿಕೊಂಡಿದ್ದಾರೆ.

ಇಂಥ ಕಠಿಣ ಪರಿಸ್ಥಿತಿಯಲ್ಲಿ ನಾನು ಧೈರ್ಯ ಪ್ರದರ್ಶಿಸದಿದ್ದರೆ 180 ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಹೀಗಾಗಿ ನಾನು ಗಂಭೀರವಾಗಿ ಗಾಯಗೊಂಡರೂ, ಪ್ರಯಾಣಿಕರ ಜೀವಕ್ಕೆ ಆಪತ್ತು ಎದುರಾಗಬಾರದು ಎಂದು ಧೈರ್ಯದಿಂದ ಹೋರಾಡಿದೆ ಎಂದು ಪೈಲಟ್‌ ತಿಳಿಸಿದರು.

ನಿಮ್ಮ ದೇಹದಲ್ಲಿ ಗಂಭೀರ ಗಾಯವಾಗಿತ್ತು. ನೀವು ಸ್ವತಃ ಜೀವನ್ಮರಣದ ಹೋರಾಟದಲ್ಲಿದ್ದಿರಿ. ಆ ಸಮಯದಲ್ಲಿ ನೀವು ನಿಮ್ಮ ಪ್ರಾಣದ ಬಗ್ಗೆ ಚಿಂತಿಸದೆ, ಎಲ್ಲಾ ಪ್ರಯಾಣಿಕರ ಜೀವಗಳ ಬಗ್ಗೆ ಕಾಳಜಿ ವಹಿಸಿದಿರಿ ಎಂದು ಆಸ್ಪತ್ರೆಯ ಹಾಸಿಗೆಯಿಂದಲೆ ಮಾತನಾಡಿದ ಕ್ಯಾಪ್ಟನ್ ಮಚ್ಚಾರ್‌ ಸಾಹಸವನ್ನು ಮೋದಿ ಕೊಂಡಾಡಿದರು.

Leave a Reply

Your email address will not be published. Required fields are marked *