ಸುದ್ದಿ ಸಂಗ್ರಹ ಶಹಾಬಾದ್
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಸೃಜನ ಶೀಲ
ಕಾರ್ಯಕ್ರಮಗಳು ಮಹಿಳೆಯರ ಪಾಲಿಗೆ ವರವಾಗಿದೆ ಎಂದು ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ವಾಸುದೇವ ಚವ್ಹಾಣ ಹೇಳಿದರು.
ನಗರದ ಭಾರತ್ ಚೌಕ್ ಬಳಿ ಓಬವ್ವ ಜ್ಞಾನ ವಿಕಾಸ ಕೇಂದ್ರದಿಂದ ನಡೆದ ಸೃಜನ ಶೀಲ ಕಾರ್ಯಕ್ರಮದಡಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಲು ಸಾಲ ಸೌಲಭ್ಯ ನೀಡುವುದರ ಜೊತೆಗೆ ಸಮಾಜದ ಬಗ್ಗೆ ಕಾಳಜಿ ಹೊಂದಿ ಪರಿಸರ ಸ್ವಚ್ಛತೆ, ಕೃಷಿ ತರಬೇತಿ, ಪರಿಕರಗಳ ವಿತರಣೆ, ವಿದ್ಯಾರ್ಥಿ ವೇತನ, ಮದ್ಯಪಾನ ವರ್ಜನ ಶಿಬಿರ, ವಿಕಲಚೇತನರಿಗೆ ತ್ರಿಚಕ್ರ ವಾಹನಕ ವಿತರಣೆ, ಬಡವರಿಗೆ ಆರ್ಥಿಕ ಸಹಾಯ, ವೃದ್ಧರಿಗೆ ವಾತ್ಸಲ್ಯ ಮನೆ, ವೃದ್ಧರಿಗೆ ಪಿಂಚಣಿ ಸೇರಿದಂತೆ ಹತ್ತು ಹಲವು ಜನಪರ
ಕಾರ್ಯಗಳು ನಿರಂತರವಾಗಿ ನಡೆಸುತ್ತಾ ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಗ್ರಾಮಾಭಿವೃದ್ಧಿ ಯೋಜನೆ ಸಂಜೀವಿನಿಯಾಗಿದೆ ಎಂದರು.
ನಿವೃತ್ತ ಶಿಕ್ಷಕಿ ಕಾಶೀಬಾಯಿ ಸಾಲಿಮಠ ಮಾತನಾಡಿ, ಮಹಿಳೆಯರು ಯೋಜನೆಯ ಕಾರ್ಯಕ್ರಮದ ಉಚಿತ ತರಬೇತಿ
ಪ್ರಯೋಜನ ಪಡೆದು ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಬೇಕು ಎಂದರು.
ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಅರ್ಚನಾ ಮಾತನಾಡಿ, ಜ್ಞಾನ ವಿಕಾಸ ಯೋಜನೆ ಮಹಿಳೆಯರಿಗೆ ತುಂಬಾ ಉಪಯೋಗಿಕಾರಿಯಾಗಿದ್ದು, ಎಲ್ಲರೂ ಉತ್ತಮ ರೀತಿಯಲ್ಲಿ
ಸ್ವಾವಲಂಬಿಗಳಾಗಿ ಬೆಳೆಯಬೇಕು ಎಂದರು.
ಸಂಪನ್ಮೂಲ ಶಿಕ್ಷಕಿ ಜಗದೇವಿ ಮಾತನಾಡಿದರು. ಸೇವಾ ಪ್ರತಿನಿಧಿ ಗುರುಬಾಯಿ ನಿರೂಪಿಸಿದರು.