ಸುದ್ದಿ ಸಂಗ್ರಹ ಶಹಾಬಾದ್
ನಗರಸಭೆಯ ಕಂದಾಯ ಅಧಿಕಾರಿ ಜಗದೇವಿ, ಕರ ವಸೂಲಿಗಾರ ಮಾಣಿಕಪ್ಪ ಮೌರ್ಯ ಇವರನ್ನು ಜಿಲ್ಲಾಧಿಕಾರಿ ಮೊಹಮ್ಮದ್ ಇಕ್ರಮುಲ್ಲಾ ಷರೀಫ್ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ, ಮತ್ತು ನಗರಸಭೆ ಪ್ರಭಾವಿ ಪೌರಾಯುಕ್ತ ಫಕ್ರುದ್ದೀನ್ ಸಾಬ್ ಅವರನ್ನು ಅಮಾನತು ಮಾಡಲು ಪೌರಾಡಳಿತ ಮಂಡಳಿ ಬೆಂಗಳೂರಿಗೆ ಶಿಫಾರಸ್ಸು ಮಾಡಿದ್ದಾರೆ.
ನಗರ ಸಭೆಯಲ್ಲಿ ವರ್ಷಾನುಗಟ್ಟಲೆಯಿಂದ ಇ- ಖಾತಾ ಮತ್ತು ಮೋಟಿಶನ್ ಮಾಡದ ಅಧಿಕಾರಿಗಳು ಕೇವಲ ಒಂದೆ ದಿನದಲ್ಲಿ 70 ಖಾತೆ ಮತ್ತು ಮೋಟೇಶನ್ ಆಗಿರುವುದು ಅನುಮಾನಗೊಂಡು ಶಾಸಕ ಬಸವರಾಜ ಮತ್ತಿಮೂಡ್ ಅವರು ಕಳೆದ ಸೋಮವಾರ ನಗರಸಭೆಗೆ ಅಕಸ್ಮಿಕ ಭೇಟಿ ನೀಡಿದಾಗ ಸಂಬಂಧಪಟ್ಟ ದಾಖಲೆ ಇಲ್ಲದೆ ಒಂದೆ ದಿನದಲ್ಲಿ 70 ಖಾತೆ ಹಾಗೂ ಮೊಟೇಷನ್ ಆಗಿರುವದು ಬೆಳಕಿಗೆ ಬಂದಿದೆ.
ಇ-ಖಾತಾ ನೀಡಲು ಆಸ್ತಿಯ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳು, ಪ್ರಸಕ್ತ ಸಾಲಿನವರೆಗಿನ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಮಾಲೀಕರ ಛಾಯಾಚಿತ್ರ ಮತ್ತು ಮಾಲೀಕರ ಗುರುತಿನ ದಾಖಲೆ ಪಡೆದು ಪರಿಶೀಲಿಸಬೇಕಾಗು -ತ್ತದೆ. ಆದರೆ ಮೂಲ ಕಡತವನ್ನು ಪರಿಶೀಲನೆಗೆ ಲಭ್ಯಪಡಿಸದೆ ಕೇವಲ ಝರಾಕ್ಸ್ ಪ್ರತಿಗಳು ನೀಡಿರುವುದು ಮತ್ತು ಆಸ್ತಿಯ ಋಣಭಾರ ಪ್ರಮಾಣ ಪತ್ರ ಲಭ್ಯವಿಲ್ಲದೆ ನಿಯಮ ಬಾಹಿರವಾಗಿ ಇ-ಖಾತಾ ನೀಡಲಾಗಿದೆ.
ಅರ್ಜಿ ಸಲ್ಲಿಕೆಯ ದಿನಾಂಕಕ್ಕಿಂತ ಮೊದಲೇ ಆಸ್ತಿ ವಹಿವಾಟಿನಲ್ಲಿ ನಮೂದು ನಡೆದಿರುವ ಅಂಶ ಗಂಭೀರವಾಗಿದ್ದು, ನಗರ ಸಭೆ ಅಧೀನಕ್ಕೆ ಬರುವ ಸರ್ವೆ ನಂ.183/9ರ ಭೂ ಪರಿವರ್ತನೆ ಮತ್ತು ಸಕ್ಷಮ ಪ್ರಾಧಿಕಾರದ ವಿನ್ಯಾಸ ಅನುಮೋದನೆ ಇಲ್ಲದ ಜಮೀನಿಗೆ ಸಂಬಂಧಿಸಿದಂತೆ 21 ನಿವೇಶನಗಳನ್ನು ಆಸ್ತಿ ವಹಿವಾಟಿನಲ್ಲಿ ದಾಖಲಿಸಿ, ಅವುಗಳ ಪೈಕಿ 05 ಸ್ವತ್ತುಗಳಿಗೆ “ಬಿ”-ಖಾತಾ ನೀಡಿರುವ ಪ್ರಕರಣದಲ್ಲಿ ಅಗತ್ಯ ಆಡಳಿತಾತ್ಮಕ ಮೇಲ್ವಿಚಾರಣೆ ಮತ್ತು ನಿಯಂತ್ರಣ ವಹಿಸುವಲ್ಲಿ ಅಧಿಕಾರಿಗಳು ಗಂಭೀರ ಕರ್ತವ್ಯಲೋಪ ಎಸೆಗಿದ್ದಾರೆ.
ಕಂದಾಯ ಅಧಿಕಾರಿ ಜಗದೇವಿ ಅವರ ಐಡಿಯಿಂದ ಲಾಗಿನ್ ಆದ ನಂತರ ಆನಂದ ಎಂಬ ವ್ಯಕ್ತಿಯ ಹೆಸರಿಗೆ ನವೀಕರಣಗೊಂಡಿರು ವುದು ದಾಖಲಾಗಿದೆ, ಜಗದೇವಿ ಮತ್ತು ಕರ ವಸೂಲಿಗಾರ ಮಾಣಿಕಪ್ಪ ಮೌರ್ಯ ಇಬ್ಬರೂ ಕೂಡ ಶಾಮೀಲಾಗಿ ಕಾನೂನು ಬಾಹಿರವಾಗಿ ಕರ್ತವಲೋಪ ಎಸೆದಿದ ಹಿನ್ನೆಲೆಯಲ್ಲಿ ಶಹಾಬಾದ್ ನಗರಸಭೆ ಪ್ರಭಾವಿ ಪೌರಾಯುಕ್ತ ಫಕ್ರುದ್ದೀನ್ ಸಾಬ್ ಅವರನ್ನು ಅಮಾನತು ಗೊಳಿಸಲು ಪೌರಾಡಳಿತ ಮಂಡಳಿ ಬೆಂಗಳೂರಿಗೆ ಜಿಲ್ಲಾಧಿಕಾರಿ ಮಹಮ್ಮದ್ ಇಕ್ರಾಮುಲ್ಲ ಶರೀಫ್ ಅವರು ಶಿಫಾರಸು ಮಾಡಿದ್ದಾರೆ, ಕಂದಾಯ ಅಧಿಕಾರಿ ಜಗದೇವಿ ಮತ್ತು ಕರ ವಸುಲಿಗಾರ ಮಾಣಿಕಪ್ಪ ಮೌರ್ಯ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.