ರಾಜ್ಯದ ಜನತೆಗೆ ಮತ್ತೊಂದು ಶಾಕ್​: ಶೀಘ್ರವೇ ಬಸ್​​ ಟಿಕೆಟ್​​ ದರ ಹೆಚ್ಚಳ ?

ನಗರದ

ಸುದ್ದಿ ಸಂಗ್ರಹ ಬೆಂಗಳೂರು
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಶೀಘ್ರವೇ ಮತ್ತೊಂದು ಶಾಕ್​​ ಕಾದಿದ್ದು, ಶೀಘ್ರವೇ ಸರ್ಕಾರಿ ಬಸ್​​ಗಳ ಟಿಕೆಟ್​​ ದರದ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಸ್ವತಃ ಮಾಹಿತಿ ನೀಡಿರುವ ಸಾರಿಗೆ ಸಚಿವ ಭೈರತಿ ಸುರೇಶ್, ಕಳೆದ ಎಂಟು ತಿಂಗಳಲ್ಲಿ ಕೇಂದ್ರ ಸರ್ಕಾರ ತೈಲೋತ್ಪನ್ನಗಳ ದರ ಹೆಚ್ಚಳ ಮಾಡಿದೆ. ಹೀಗಿದ್ದರೂ ನಾವು ಬಸ್ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಇದರಿಂದ ನಾಲ್ಕೂ ಸಾರಿಗೆ ನಿಗಮಗಳಿಗೆ ಸಾವಿರಾರು ಕೋಟಿ ರೂ ನಷ್ಟವಾಗುತ್ತಿದೆ. ಹೀಗಾಗಿ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಸಮಿತಿ ದರ ಪರಿಷ್ಕರಣೆ ಸಂಬಂಧಿಸಿದಂತೆ ಅಧ್ಯಯನ ನಡೆಸುತ್ತಿದ್ದು, ಸದ್ಯದಲ್ಲೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಹೆಚ್ಚು ಹೊರೆಯಾಗದ ರೀತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ದರ ಪರಿಷ್ಕರಣೆ ಮಾಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

ಶಕ್ತಿ ಯೋಜನೆ ಫಲಾನುಭವಿಗಳಿಗೆ ಸ್ಮಾರ್ಟ್​​ ಕಾರ್ಡ್​​
ಸಾಮಾನ್ಯ ಸರ್ಕಾರಿ ಬಸ್​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿಯಲ್ಲಿ ರಾಜ್ಯದ ಒಂದು ಕೋಟಿಗೂ ಅಧಿಕ ಮಹಿಳೆಯರಿಗೆ ಮೊದಲ ಹಂತದಲ್ಲಿ ಉಚಿತ ಸ್ಮಾರ್ಟ್ ಕಾರ್ಡ್​​ ವಿತರಿಸಲಾಗುತ್ತದೆ. ಇದಕ್ಕೆ 250 ಕೋಟಿ ರೂ ವೆಚ್ಚವಾಗಲಿದ್ದು, ಸದ್ಯದಲ್ಲೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಬಿಎಂಟಿಸಿ ಸೇರ್ಪಡೆಯಾಗಲಿವೆ 4,500 ಎಲೆಕ್ಟ್ರಿಕ್ ಬಸ್​​ಗಳು
ರಾಜ್ಯ ಸಚಿವ ಸಂಪುಟದಲ್ಲಿ 4,500 ಇ- ಬಸ್ ಪಡೆಯಲು ಅನುಮೋದನೆ ನೀಡಲಾಗಿದ್ದು, ಕೇಂದ್ರ ಸರ್ಕಾರದ ಪಿಎಂ ಇ-ಡ್ರೈವ್ ಯೋಜನೆಯಡಿ ಬಿಎಂಟಿಸಿಗೆ ಬಸ್ ಪೂರೈಕೆ ಆಗಲಿದೆ‌. ಸಾರಿಗೆ ಇಲಾಖೆ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಬಿಎಂಟಿಸಿಗೆ ಒಷ್ಟೊಂದು ಎಲೆಕ್ಟ್ರಿಕ್ ಬಸ್​​ಗಳು ಲಭ್ಯವಾಗಲಿವೆ. ಇದಕ್ಕಾಗಿ ರಾಜ್ಯ ಸರ್ಕಾರ ಪ್ರತಿ ವರ್ಷ 600 ಕೋಟಿ ರೂ ವೆಚ್ಚ ಮಾಡಲಿದೆ. 20 ವರ್ಷಕ್ಕೆ ಸುಮಾರು 12,000 ಕೋಟಿ ರೂ ಗಳನ್ನು ಸರ್ಕಾರ ಈ ಯೋಜನೆಗೆ ಖರ್ಚು ಮಾಡಲಿದೆ. 12 ಮೀಟರ್ ಉದ್ದದ 3,800 ಮತ್ತು 9 ಮೀಟರ್ ಉದ್ದ 900 ಎಲೆಕ್ಟ್ರಿಕ್ ಬಸ್​​ಗಳನ್ನು ಇದು ಒಳಗೊಂಡಿದೆ. ಈ ಪೈಕಿ 400 ಬಸ್​​ಗಳು ಹವಾನಿಯಂತ್ರಿತವಾಗಿರುತ್ತವೆ. ಇವಿ ಬಸ್ ವಾಹನ ತಯಾರಿಕಾ ಸಂಸ್ಥೆಗಳು ಹಂತಹಂತವಾಗಿ ಬಸ್​​ಗಳನ್ನು ತಯಾರಿಸಿ ಬಿಎಂಟಿಸಿಗೆ ಪೂರೈಕೆ ಮಾಡಲಿದ್ದು, ಈ ಇವಿ ಬಸ್ ಗಳ ಸಂಚಾರದಿಂದ ಬೆಂಗಳೂರು ನಗರದ ಪರಿಸರ ಮಾಲಿನ್ಯ ಪ್ರಮಾಣ ಕಡಿಮೆಯಾಗಲಿದೆ. ಕೇಂದ್ರ ಸರ್ಕಾರದಿಂದ 2 ಸಾವಿರ ಕೋಟಿ ರೂ ಸಾಲ ತೆಗೆದುಕೊಳ್ಳಲು ನಿರ್ಧರಿಸಲಾಗಿದ್ದು, ಇಡಿ ರಾಜ್ಯದಲ್ಲಿ ಹೊಸ ಬಸ್ ಡಿಪೋ ನಿರ್ಮಾಣ ಮತ್ತು ಹಳೆಯ ಬಸ್ ನಿಲ್ದಾಣಗಳ ಉನ್ನತೀಕರಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *