ಸುದ್ದಿ ಸಂಗ್ರಹ ಶಿವಮೊಗ್ಗ
ಅಕ್ಷರ ಕಲಿಸಿ, ತಿದ್ದಿ ತೀಡಿ ಸನ್ಮಾರ್ಗ ತೋರಬೇಕಾದ ಶಿಕ್ಷಕಿಯೊಬ್ಬರು ಮಕ್ಕಳ ಮೇಲೆ ರಾಕ್ಷಸೀ ಪ್ರವೃತ್ತಿ ಮೆರೆದ ಅತ್ಯಂತ ಅಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದರೆಂಬ ಕ್ಷುಲ್ಲಕ ಕಾರಣಕ್ಕೆ, ಅತಿಥಿ ಶಿಕ್ಷಕಿ ಮಕ್ಕಳ ಬೆನ್ನಿನ ಮೇಲೆ ಬಾಸುಂಡೆ ಎದ್ದು ರಕ್ತ ಬರುವಂತೆ ಮನಬಂದಂತೆ ಥಳಿಸಿದ್ದು, ಈ ಘಟನೆ ಇಡಿ ನಾಗರಿಕ ಸಮಾಜವನ್ನೆ ಬೆಚ್ಚಿಬೀಳಿಸಿದೆ.
ನಡೆದಿದ್ದೆನು ?
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಪ್ರದೇಶವಾಗಿರುವ ತುಮರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿರುವಾಸೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅತಿಥಿ ಶಿಕ್ಷಕಿ ರಕ್ಷಿತಾ, ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಾರೆಂಬ ಸಿಟ್ಟಿಗೆ 2, 3 ಮತ್ತು 4ನೇ ತರಗತಿಯ ಮೂವರು ಮಕ್ಕಳಿಗೆ ಕೋಲಿನಿಂದ ಅಮಾನುಷವಾಗಿ ಥಳಿಸಿದ್ದಾರೆ. ಶಾಲೆ ಬಿಟ್ಟು ಮನೆಗೆ ಬಂದ ಮಕ್ಕಳ ಬೆನ್ನಿನ ಮೇಲಿದ್ದ ರಕ್ತದ ಕಲೆಗಳು ಮತ್ತು ಬಾಸುಂಡೆಗಳು ಕಂಡು ಪೋಷಕರು ದಿಗ್ಭ್ರಮೆಗೊಂಡಿದ್ದಾರೆ.
ಶಾಲೆಯ ಮುಂದೆ ಪೋಷಕರ ಆಕ್ರೋಶ: ಗ್ರಾಮಸ್ಥರಿಂದ ಪ್ರತಿಭಟನೆ
ಪುಟ್ಟ ಮಕ್ಕಳ ಮೇಲಿನ ಈ ಕೃತ್ಯ ತಿಳಿಯುತ್ತಿದ್ದಂತೆ ಶಾಲೆ ಬಳಿ ಜಮಾಯಿಸಿದ ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶಾಲೆಯ ಆವರಣದಲ್ಲಿ ಜಮಾಯಿಸಿದ ಗ್ರಾಮಸ್ಥರು, ಅಮಾನವೀಯವಾಗಿ ನಡೆದುಕೊಂಡ ಅತಿಥಿ ಶಿಕ್ಷಕಿ ರಕ್ಷಿತಾ ವಿರುದ್ಧ ತಕ್ಷಣ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದು ಪ್ರತಿಭಟಿಸಿದರು. ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಣ ಇಲಾಖೆ ವಿರುದ್ಧವೂ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಅತಿಥಿ ಶಿಕ್ಷಕಿ ರಕ್ಷಿತಾ ಕೆಲಸದಿಂದ ವಜಾ: ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಶಿವಮೊಗ್ಗ ಡಿಡಿಪಿಐ ಎಸ್.ಆರ್ ಮಂಜುನಾಥ್, ಅಮಾನವೀಯವಾಗಿ ಮಕ್ಕಳ ಮೇಲೆ ಹಲ್ಲೆ ನಡೆಸಿದ ಅತಿಥಿ ಶಿಕ್ಷಕಿ ರಕ್ಷಿತಾಳನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಿ ಆದೇಶಿಸಿದ್ದಾರೆ. ಗಾಯವಾಗಿರುವ ಮಕ್ಕಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಶಾಲೆಗಳಲ್ಲಿ ಯಾವುದೆ ಕಾರಣಕ್ಕೂ ಮಕ್ಕಳಿಗೆ ದೈಹಿಕ ದಂಡನೆ ಮತ್ತು ಮಾನಸಿಕ ಹಿಂಸೆ ನೀಡಬಾರದು ಎಂದು ಕಟ್ಟುನಿಟ್ಟಿನ ನಿಯಮವಿದ್ದರೂ ಇಂತಹ ಕೃತ್ಯ ಎಸಗಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಡಿಡಿಪಿಐ ಎಲ್ಲಾ ಶಿಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ಈ ಆಘಾತಕಾರಿ ಘಟನೆಯನ್ನು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.