ಸುದ್ದಿ ಸಂಗ್ರಹ ಕಾಳಗಿ
ಪಟ್ಟಣದ ಕಲಬುರಗಿ-ಚಿಂಚೋಳಿ ರಾಜ್ಯ ಹೆದ್ದಾರಿ ಸಂಪರ್ಕದ ಸಿಸಿರಸ್ತೆ ವಿಭಜಕದ ಸ್ಥಳದಲ್ಲಿ ಅಳವಡಿಸಿರುವ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರದ ಫಲಕವನ್ನು ಹರಿದುಹಾಕಿ ಅವಮಾನಿಸಿರುವ ಕಿಡಿಗೇಡಿಗಳನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾರ ಕೋಲಿ ಸಮಾಜದವರು ಪ್ರತಿಭಟನೆ ನಡೆಸಿದರು.
ಕಲಬುರಗಿ-ಚಿಂಚೋಳಿ ರಾಜ್ಯ ಹೆದ್ದಾರಿ ಸಂಚಾರ ತಡೆದು ಎರಡು ಗಂಟೆಗೂ ಅಧಿಕ ಕಾಲ ಪ್ರತಿಭಟಿಸಿದರು. ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
‘ಕುಲಗುರುವಿಗೆ ಅವಮಾನ ಮಾಡಿರುವ ಘಟನೆಯು ಕೋಲಿ ಸಮಾಜದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಸಮಾಜದಲ್ಲಿ ಅಶಾಂತಿ, ಗದ್ದಲ, ಗಲಾಟೆ, ಸಾಮಾಜಿಕ ಸೌಹಾರ್ದತೆ ಹಾಳು ಮಾಡುವ ದುರುದ್ದೇಶದಿಂದ ಕಿಡಿಗೇಡಿಗಳು ಸಮಾಜ ವಿರೋಧಿ ಕೃತ್ಯ ಎಸಗಿದ್ದು, ಅವರನ್ನು ತಕ್ಷಣ ಬಂಧಿಸಬೇಕು’ ಎಂದು ಆಗ್ರಹಿಸಿದರು.
ಸ್ಥಳೀಯ ಆಡಳಿತ ಕೂಡಲೇ ಚೌಡಯ್ಯನವರ ಹೊಸ ಭಾವಚಿತ್ರ ಅಂಟಿಸಿ ಗೌರವ ಸೂಚಿಸಬೇಕು. ಘಟನೆ ಮರುಕಳಿಸದಂತೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳದಲ್ಲಿ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪಿಸಬೇಕು’ ಎಂದು ಒತ್ತಾಯಿಸಿದರು.
ಸ್ಥಳಕ್ಕೆ ತಹಶೀಲ್ದಾರ್ ಪೃಥ್ವಿರಾಜ ಪಾಟೀಲ, ಪಿಎಸ್ಐ ತಿಮ್ಮಯ್ಯ ಬಿ.ಕೆ ಆಗಮಿಸಿ, ‘ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಕಾನೂನುಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಫಲಕದಲ್ಲಿ ಹೊಸ ಭಾವಚಿತ್ರ ಅಂಟಿಸಿ ಹೂಮಾಲೆ ಹಾಕಿ ಗೌರವ ಸಲ್ಲಿಸಲಾಯಿತು.
ಸಮಾಜದ ಮುಖಂಡರಾದ ಜಗನ್ನಾಥ ತೇಲಿ, ನಾಗಣ್ಣಾ ಕಮಕನೂರ, ಶಿವರಾಯ ಕೋಯಿ, ರೇವಣಸಿದ್ದಪ್ಪ ಚೇಂಗಟಾ, ಜಗನ್ನಾಥ ಚಂದನಕೇರಿ, ಭೀಮರಾವ ಪಾಟೀಲ, ಶಿವಕುಮಾರ ಕಮಕನೂರ, ಸಿದ್ದು ಕೇಶ್ವಾರ, ಜಗನ್ನಾಥ ಮೊಘಾ, ಪ್ರವೀಣ ನಾಮದಾರ, ಸಾಯಿಪ್ರಸಾದ ರಟಕಲ್, ರತ್ನಮ್ಮ ಡೊಣ್ಣೂರ, ಚಂದ್ರಶೇಖರ ಭಂಕಲಗಿ, ವಿಕ್ರಮ ನಾಮದಾರ, ಮಲ್ಲು ಮರಗುತ್ತಿ, ಬಸವರಾಜ ತಳವಾರ, ಭೀಮರಾಯ ಮಲಘಾಣ, ಸಾಬಣ್ಣಾ ಚಿಮ್ಮನಚೋಡ, ಸುಂದರ ಸಾಗರ, ಮಲ್ಲಿಕಾರ್ಜುನ ಸಿಂಘೆ, ರೇವಣಸಿದ್ದಪ್ಪ ಪೂಜಾರಿ, ಅರ್ಜುನ ಚಿಂಚೋಳಿ ಸೇರಿದಂತೆ ಅನೇಕರಿದ್ದರು.