ChatGPT ಬಳಸಿ 75,000 ನಕಲಿ ಡೊನೇಶನ್‌ ರಸೀದಿ ಸೃಷ್ಟಿ: ಕಳುಹಿಸಿದ್ದು ಸ್ವಂತ QR ಕೋಡ್, ಕತರ್ನಾಕ್ ಅರೆಸ್ಟ್

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಠ್ಮಂಡು
ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಪರಿಸ್ಥಿತಿಯನ್ನೆ ಬಂಡವಾಳ ಮಾಡಿಕೊಂಡು, ಎಐ ತಂತ್ರಜ್ಞಾನದ ನೆರವಿನಿಂದ ಸಾರ್ವಜನಿಕರನ್ನು ವಂಚಿಸಲು ಯತ್ನಿಸಿದ 32 ವರ್ಷದ ವ್ಯಕ್ತಿಯೊಬ್ಬನನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ.

ChatGPT ಬಳಸಿ ನಕಲಿ ರಸೀದಿ ಸೃಷ್ಟಿ
ರಾಮೆಚಾಪ್ ಜಿಲ್ಲೆಯ ಗೋಕುಲಗಂಗಾ ಗ್ರಾಮೀಣ ಪುರಸಭೆಯ ಭಗವಾನ್ ಕರ್ಕಿ ಎಂಬಾತ ಈ ಕೃತ್ಯ ಎಸಗಿದ ಆರೋಪಿ. ಈತ ನೇಪಾಳ ಪ್ರಧಾನ ಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 1,20,000 ನೇಪಾಳಿ ರೂಪಾಯಿ (ಸುಮಾರು 75,000) ದೇಣಿಗೆ ನೀಡಿರುವುದಾಗಿ ಹೇಳಿಕೊಳ್ಳುವ ನಕಲಿ ಸ್ವೀಕೃತಿ ಪತ್ರವನ್ನು ChatGPT ತಂತ್ರಜ್ಞಾನ ಬಳಸಿ ಸಿದ್ಧಪಡಿಸಿದೆ.

ನಂತರ, ಈ ನಕಲಿ ರಸೀದಿಯ ಜೊತೆಗೆ ತನ್ನ ವೈಯಕ್ತಿಕ QR ಕೋಡ್ ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಇದನ್ನು ಕಂಡ ಸಾರ್ವಜನಿಕರು ಮತ್ತು ದಾನಿಗಳು ಇದು ಸರ್ಕಾರಿ ಅಧಿಕೃತ ಖಾತೆಯೆಂದೆ ಭಾವಿಸಿ ಆತನ ಖಾತೆಗೆ ಹಣ ವರ್ಗಾಯಿಸಿದ್ದರು. ಆರೋಪಿಯ ಈ ಆನ್‌ಲೈನ್ ವಂಚನೆ ಜಾಲವನ್ನು ಪತ್ತೆಹಚ್ಚಿದ ಪೊಲೀಸರು ಆತನನ್ನು ಬಂಧಿಸಿ, ತನಿಖೆ ಚುರುಕುಗೊಳಿಸಿದ್ದಾರೆ.

ಸೋಶಿಯಲ್ ಮೀಡಿಯಾ ವಂಚನೆ ಜಾಲ ವ್ಯಾಪಕವಾಗುತ್ತಿದೆ, ಇತ್ತೀಚೆಗೆ ನೇಪಾಳದ ರಸುವಾ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದ ನಂತರ ಜಾಗತಿಕ ಮಟ್ಟದಲ್ಲಿ ನಿಧಿ ಸಂಗ್ರಹಣೆ ನಡೆಯುತ್ತಿದೆ. ಇದನ್ನೆ ಹಾದಿ ತಪ್ಪಿಸಲು ಹಲವು ನಕಲಿ ಸಾಮಾಜಿಕ ಜಾಲತಾಣ ಖಾತೆಗಳು ಸೃಷ್ಟಿಯಾಗಿವೆ.

ಇಂಡಿಯಾ ಟುಡೇ ನಡೆಸಿದ ತನಿಖೆಯಲ್ಲಿ, ಪ್ರವಾಹ ಸಂತ್ರಸ್ತರ ನೆರವಿನ ಹೆಸರಿನಲ್ಲಿ ಹೊಸದಾಗಿ ರಚಿಸಲಾದ ಅಥವಾ ಮರುನಾಮಕರಣಗೊಂಡ ಹಲವು ಖಾತೆಗಳು ತಮ್ಮ ವೈಯಕ್ತಿಕ ಕ್ಯೂಆರ್ ಕೋಡ್‌ಗಳನ್ನು ಪ್ರಚಾರ ಮಾಡುತ್ತಿರುವುದು ಪತ್ತೆಯಾಗಿದೆ.

ನೇಪಾಳ ಸರ್ಕಾರದ ಎಚ್ಚರಿಕೆ ಮತ್ತು ಮಾರ್ಗದರ್ಶಿ
ಆಗಸ್ಟ್ 30ರ ವೇಳೆಗೆ ಪ್ರಧಾನ ಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 5 ಬಿಲಿಯನ್ NPR (ನೇಪಾಳಿ ರೂಪಾಯಿ)ಗೂ ಹೆಚ್ಚು ಹಣ ಸಂಗ್ರಹವಾಗಿದೆ ಎಂದು ರೇಡಿಯೋ ನೇಪಾಳ ವರದಿ ಮಾಡಿದೆ. ಅನಧಿಕೃತ ವೈಯಕ್ತಿಕ ಬ್ಯಾಂಕ್ ಖಾತೆಗಳು, ಇ-ವ್ಯಾಲೆಟ್‌ಗಳು, ನಕಲಿ ಸರ್ಕಾರಿ ಲೋಗೋಗಳು ಮತ್ತು ಪರಿಚಯವಿಲ್ಲದ QR ಕೋಡ್‌ಗಳನ್ನು ನಂಬಿ ಹಣ ವರ್ಗಾಯಿಸದಂತೆ ಪೊಲೀಸರು ಜಾಗೃತಿ ಮೂಡಿಸಿದ್ದಾರೆ. ದೇಣಿಗೆ ನೀಡುವ ಮುನ್ನ ಪ್ರಧಾನ ಮಂತ್ರಿಗಳ ಕಚೇರಿ ಅಥವಾ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾದ ಬ್ಯಾಂಕ್ ವಿವರಗಳನ್ನು ಮಾತ್ರ ಬಳಸುವಂತೆ ನೇಪಾಳ ಸರ್ಕಾರ ಮನವಿ ಮಾಡಿದೆ.

Leave a Reply

Your email address will not be published. Required fields are marked *