ಚಿತ್ತಾಪುರ:‌ ಯಲ್ಲಮ್ಮನ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಪತ್ತೆ

ಪಟ್ಟಣದ

ಸುದ್ದಿ ಸಂಗ್ರಹ ಚಿತ್ತಾಪುರ
ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ಧಾರ್ಮಿಕ ಕ್ಷೇತ್ರ ನಾಗಾವಿ ಯಲ್ಲಮ್ಮ ದೇವಿಯ ದೇವಸ್ಥಾನದ ಹುಂಡಿಯನ್ನು ತಹಸೀಲ್ದಾರ್ ನಾಗಯ್ಯ ಹಿರೇಮಠ ನೇತೃತ್ವದಲ್ಲಿ ಗುರುವಾರ ತೆರೆದು ಎಣಿಕೆ ಮಾಡುವ ಸಮಯದಲ್ಲಿ ವಿವಿಧ ದೇಶಗಳ ವಿದೇಶಿ ನೋಟುಗಳು ಮತ್ತು ನಾಣ್ಯಗಳು ಪತ್ತೆಯಾಗಿವೆ.

ಹುಂಡಿಯಲ್ಲಿನ ಹಣ ಎಣಿಕೆ ಮಾಡುವಾಗ ಕೊರಿಯಾ, ಕೆನಡಾ, ಯುಎಇ ಮತ್ತು ಆಮೆರಿಕ ದೇಶಗಳ ವಿವಿಧ ಮೌಲ್ಯದ ನೋಟುಗಳು ಮತ್ತು ನಾಣ್ಯಗಳು ಸೇರಿ ಒಟ್ಟು 17,010 ಮೌಲ್ಯದ ವಿದೇಶಿ ಕರೆನ್ಸಿ ಇರುವುದು ಪತ್ತೆಯಾಗಿದೆ.

ವಿದೇಶಿ ಕರೆನ್ಸಿಯನ್ನು ಭಾರತ ದೇಶದ ರೂಪಾಯಿಗಳಿಗೆ ವಿನಿಮಯ ಮಾಡಿಕೊಂಡು ದೇವಸ್ಥಾನದ ಖಾತೆಗೆ ಜಮೆ ಮಾಡಲಾಗುತ್ತದೆ. ಹುಂಡಿಯಲ್ಲಿನ ಹಣ ಎಣಿಕೆಯಲ್ಲಿ ಒಟ್ಟು 16.32 ಲಕ್ಷ ಇತ್ತು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

ಕಳೆದ ಫೆ.21 ರಂದು ನಡೆದ ಹುಂಡಿ ಹಣ ಎಣಿಕೆ ಸಮಯದಲ್ಲಿ ಒಟ್ಟು 14.73 ಲಕ್ಷ ಹಣದ ಜೊತೆಗೆ ಮಲೇಶಿಯಾ ದೇಶದ 18 ನೋಟುಗಳು ಮತ್ತು ಎರಡು ನಾಣ್ಯಗಳು ಪತ್ತೆಯಾಗಿದ್ದವು.

ಪ್ರಸ್ತುತ ನಾಲ್ಕು ದೇಶಗಳ ವಿದೇಶಿ ಕರೆನ್ಸಿ ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದೆ. ಯಲ್ಲಮ್ಮ ದೇವಿಯ ಭಕ್ತರು ವಿದೇಶದಲ್ಲಿಯೂ ಇದ್ದಾರೊ ಅಥವಾ ದೇವಿಯ ಭಕ್ತರು ವಿದೇಶಕ್ಕೆ ಹೋಗಿ ಬಂದು ಅಲ್ಲಿನ ಕರೆನ್ಸಿ ತಂದು ಭಕ್ತಿಯ ಕಾಣಿಕೆಯಾಗಿ ಹುಂಡಿಗೆ ಹಾಕುತ್ತಿದ್ದಾರೊ ? ಎಂಬುದು ಭಕ್ತ ವಲಯದಲ್ಲಿ ಚರ್ಚೆ ಶುರುವಾಗಿದೆ.

ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಹಣ ಎಣಿಕೆಯಲ್ಲಿ ಪಾಲ್ಗೊಂಡಿದ್ದರು.

ಹುಂಡಿ ತೆರೆಯುವ ಮತ್ತು ಹಣ ಎಣಿಕೆಯ ಸಮಯದಲ್ಲಿ ಅಹಿತಕರ ಘಟನೆ, ಯಾವುದೆ ರೀತಿಯ ಸಮಸ್ಯೆ, ತೊಂದರೆ ಆಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Leave a Reply

Your email address will not be published. Required fields are marked *